ದೇಶದ ಅತಿ ಸಿರಿವಂತ ದೇಗುಲಗಳ ಪೈಕಿ ಒಂದಾಗಿರುವ ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ಮಂದಿರ ಬರೋಬ್ಬರಿ 260 ಕೆಜಿ ಚಿನ್ನವನ್ನು ಹೊಂದಿದ್ದು, ಬ್ಯಾಂಕಿನಲ್ಲಿ 1,700 ಕೋಟಿ ರೂಪಾಯಿಗಳನ್ನು ಠೇವಣಿಯಾಗಿ ಇಡಲಾಗಿದೆ. ಅಷ್ಟೇ ಅಲ್ಲ ಗುರುವಾಯೂರಪ್ಪ ದೇಗುಲಕ್ಕೆ ಸೇರಿದ 271.05 ಎಕರೆ ಭೂಮಿಯೂ ಇದೆ.
ಮಾಹಿತಿ ಹಕ್ಕು ಕಾಯ್ದೆ ಅಡಿ ಗುರುವಾಯೂರು ನಿವಾಸಿ ಎಂ.ಕೆ. ಹರಿದಾಸ್ ಎಂಬವರು ಸಲ್ಲಿಸಿದ್ದ ಅರ್ಜಿಗೆ ದೇಗುಲದ ಆಡಳಿತ ಮಂಡಳಿ ಈ ವಿವರವನ್ನು ನೀಡಿದ್ದು, 19,981 ಚಿನ್ನದ ಲಾಕೆಟ್ ಗಳು, 6,605 ಕೆಜಿ ಬೆಳ್ಳಿ ಹಾಗೂ 5,359 ಬೆಳ್ಳಿ ಲಾಕೆಟ್ ಗಳು ಇದೆ ಎಂದು ತಿಳಿಸಿದೆ.
ಈ ಮೊದಲು ಭದ್ರತೆಯ ಕಾರಣ ನೀಡಿ ಚಿನ್ನಾಭರಣ ಹಾಗೂ ಸ್ವತ್ತಿನ ವಿವರ ನೀಡಲು ಆಡಳಿತ ಮಂಡಳಿ ನಿರಾಕರಿಸಿತ್ತಾದರೂ ಇದೀಗ ಮಾಹಿತಿ ಹಕ್ಕು ಕಾಯ್ದೆ ಅಡಿ ವಿವರ ಲಭ್ಯವಾಗಿದೆ. ಆದರೆ ಚಿನ್ನ ಹಾಗೂ ಬೆಳ್ಳಿ ಆಭರಣಗಳ ಮೌಲ್ಯವನ್ನು ಬಹಿರಂಗಪಡಿಸಲಾಗಿಲ್ಲ. ಈ ಆಭರಣಗಳ ಪೈಕಿ ಕೆಲವು ಪುರಾತನ ಒಡವೆಗಳಿದ್ದು, ಅವುಗಳ ನಿಖರ ಮೌಲ್ಯ ನಿರ್ಧರಿಸುವುದು ಕಷ್ಟ ಎಂದು ಹೇಳಲಾಗಿದೆ.