ಗರ್ಭಾವಸ್ಥೆಯು ಬಹಳ ಸುಂದರವಾದ ಪಯಣ. ಹೊಸ ತಾಯಂದಿರು ಇದನ್ನು ಆನಂದಿಸುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಯಿಂದ ದೈಹಿಕವಾಗಿಯೂ ಅನೇಕ ಬದಲಾವಣೆಗಳಿಗೆ ಒಳಗಾಗಬೇಕಾಗುತ್ತದೆ, ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಮೂಡ್ ಸ್ವಿಂಗ್, ತೂಕ ಹೆಚ್ಚಾಗುವುದು, ಕಾಲುಗಳ ಊತ, ವಾಂತಿ ಅಥವಾ ವಾಕರಿಕೆ ಇದನ್ನು ಹೊರತುಪಡಿಸಿ ಆಗಾಗ್ಗೆ ಮೂತ್ರ ವಿಸರ್ಜನೆಯ ಸಮಸ್ಯೆಯೂ ಇರುತ್ತದೆ.
ಗರ್ಭಿಣಿಗೆ 7 ತಿಂಗಳು ತುಂಬಿದ ಬಳಿಕವಂತೂ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುವುದು ದುಸ್ತರವಾಗುತ್ತದೆ. ದೊಡ್ಡ ಹೊಟ್ಟೆಯಿಂದಾಗಿ, ಈ ಸಮಯದಲ್ಲಿ ಎದ್ದು ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಹಾಗಿದ್ದಲ್ಲಿ ಗರ್ಭಾವಸ್ಥೆಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆಯ ಕಾರಣಗಳು ಮತ್ತು ಅದನ್ನು ತಪ್ಪಿಸುವುದು ಹೇಗೆ ಎಂಬುದನ್ನು ತಿಳಿಯೋಣ. ಗರ್ಭಾವಸ್ಥೆಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುವುದು ಸರ್ವೇ ಸಾಮಾನ್ಯ. ಇದು ಹಾರ್ಮೋನುಗಳ ಬದಲಾವಣೆಯಿಂದಾಗಿ ಸಂಭವಿಸಬಹುದು.
ಎಚ್ಸಿಜಿ ಹಾರ್ಮೋನ್ ಮಟ್ಟದಲ್ಲಿನ ಹೆಚ್ಚಳವು ಇದಕ್ಕೆ ಕಾರಣ. ದೇಹದಲ್ಲಿ ಈ ಹಾರ್ಮೋನ್ ಮಟ್ಟ ಹೆಚ್ಚಾದಾಗ ಗರ್ಭಿಣಿಯರ ಕಿಡ್ನಿಯಲ್ಲಿ ರಕ್ತ ಸಂಚಾರ ಹೆಚ್ಚಾಗಿ ಆಗಾಗ ಮೂತ್ರ ವಿಸರ್ಜಿಸಬೇಕಾಗುತ್ತದೆ. ಗರ್ಭಾವಸ್ಥೆಯ ಕೊನೆಯ ತಿಂಗಳುಗಳಲ್ಲಿ, ಗರ್ಭಾಶಯದ ಗಾತ್ರವು ಹೆಚ್ಚಾಗುತ್ತದೆ. ಇದರಿಂದಾಗಿ ಅದು ಮೂತ್ರಕೋಶದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಮೂತ್ರಕೋಶವು ತುಂಬಿದಂತಾಗಿ ಪದೇ ಪದೇ ಯೂರಿನ್ ಮಾಡಬೇಕೆನಿಸುತ್ತದೆ.
ಗರ್ಭಾವಸ್ಥೆಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆಗೆ ನೀವು ಸೇವನೆ ಮಾಡುವ ಆಹಾರ ಮತ್ತು ಪಾನೀಯವು ಕೂಡ ಕಾರಣ. ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ, ನಾವು ಹೆಚ್ಚು ದ್ರವವನ್ನು ಸೇವಿಸಲು ಪ್ರಾರಂಭಿಸುತ್ತೇವೆ. ಇದರಿಂದಾಗಿ ಪದೇ ಪದೇ ಮೂತ್ರ ವಿಸರ್ಜನೆಯ ಸಮಸ್ಯೆಯೂ ಬರಬಹುದು. ಇದಲ್ಲದೆ ಗರ್ಭಾವಸ್ಥೆಯ ಆರನೇ ವಾರದಲ್ಲಿ ಮತ್ತು 24ನೇ ವಾರದಲ್ಲಿ ಯುಟಿಐ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದಾಗಿ ನೀವು ಪದೇ ಪದೇ ಮೂತ್ರ ವಿಸರ್ಜನೆಯನ್ನು ಅನುಭವಿಸಬಹುದು.
ಇದನ್ನು ತಪ್ಪಿಸುವುದು ಹೇಗೆ?
ಗರ್ಭಾವಸ್ಥೆಯಲ್ಲಿ ಚಹಾ ಮತ್ತು ಕಾಫಿಯಂತಹ ಕೆಫೀನ್ ಭರಿತ ವಸ್ತುಗಳನ್ನು ಸೇವಿಸಬೇಡಿ. ಇದು ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು. ರಾತ್ರಿ ಮಲಗುವ ಮುನ್ನ ಕಡಿಮೆ ನೀರು ಕುಡಿಯಿರಿ. ಇದರಿಂದ ಮೂತ್ರ ವಿಸರ್ಜನೆಗೆ ಮತ್ತೆ ಮತ್ತೆ ಏಳಬೇಕಾಗುವುದಿಲ್ಲ. ದಿನವಿಡೀ ಸಮತೋಲಿತ ಪ್ರಮಾಣದಲ್ಲಿ ದ್ರವಗಳನ್ನು ಸೇವಿಸಿ. ಈ ಸಮಸ್ಯೆಯನ್ನು ತಪ್ಪಿಸಲು, ಗರ್ಭಾವಸ್ಥೆಯಲ್ಲಿ ಕೆಗೆಲ್ ವ್ಯಾಯಾಮ ಮಾಡಿ. ಇದು ಶ್ರೋಣಿಯ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಮೂತ್ರ ವಿಸರ್ಜನೆಯ ಸಮಸ್ಯೆಯನ್ನು ನಿವಾರಿಸುತ್ತದೆ.