800 ವರ್ಷಗಳ ಇತಿಹಾಸವಿರುವ ಬಪ್ಪನಾಡಿನ ದುರ್ಗಾ ಪರಮೇಶ್ವರಿ ಮೂಲ್ಕಿಯ ಶಾಂಭವಿ ನದಿಯ ದಡದಲ್ಲಿ ನೆಲೆಗೊಂಡಿದ್ದಾಳೆ. ಮಂಗಳೂರಿನಿಂದ 29 ಕಿ.ಮೀ. ದೂರದಲ್ಲಿರುವ ಇಲ್ಲಿನ ದುರ್ಗೆ ಲಿಂಗರೂಪಿಯಾಗಿರುವುದು ವಿಶೇಷ.
ಇದು ಎಲ್ಲ ಜನಾಂಗ ಮತ್ತು ಜಾತಿಗಳಿಂದ ಆರಾಧಿಸಲ್ಪಟ್ಟಿದೆ. ಮುಸಲ್ಮಾನರಿಗೂ ಈ ದೇವಸ್ಥಾನದ ಪ್ರಸಾದ ತೆಗೆದುಕೊಳ್ಳುವ ಅವಕಾಶವಿರುವುದು ಇಲ್ಲಿನ ಮತ್ತೊಂದು ವಿಶೇಷ.
ಹೀಗಾಗಿ ಈ ತಾಣ ಕೋಮು ಸೌಹಾರ್ದತೆಯ ತಾಣವಾಗಿಯೂ ಬದಲಾಗಿದೆ. ಕಳೆದ 40 ವರ್ಷಗಳಿಂದ ಇಲ್ಲಿನ ಯಕ್ಷಗಾನ ತಂಡ “ಬಪ್ಪನಾಡು ಕ್ಷೇತ್ರ ಮಹಾತ್ಮೆ”ಯನ್ನು ನಡೆಸುತ್ತಿದೆ. ಬಪ್ಪ ಬ್ಯಾರಿ ಎಂಬ ಕೇರಳದ ಮುಸಲ್ಮಾನ ವ್ಯಾಪಾರಿಯು ಈ ದೇವಸ್ಥಾನವನ್ನು ಕಟ್ಟಿದ್ದಾರೆ ಎನ್ನಲಾಗಿದೆ.
ಮುಲ್ಕಿ ನದಿಯ ಪ್ರವಾಹದಲ್ಲಿ ದೇವಸ್ಥಾನ ನಶಿಸಿದರೂ ಐದು ಲಿಂಗಗಳ ಪೀಠಕ್ಕೆ ಹಾನಿಯಾಗಿರಲಿಲ್ಲ. ಅತನಿಗೆ ದುರ್ಗಾ ದೇವಿಯು ಕನಸಿನಲ್ಲಿ ಬಂದು ಲಿಂಗಗಳಿಗೆ ದೇವಸ್ಥಾನವನ್ನು ಕಟ್ಟಲು ಹೇಳಿದಂತಾಯಿತು. ಅದ್ದರಿಂದ ಈ ಸ್ಥಳವನ್ನು ಬಪ್ಪ ಎಂದು ಕರೆಯಲಾಯಿತು ಎನ್ನುತ್ತದೆ ಮೂಲಗಳು.
ಈ ಐದು ಲಿಂಗಗಳು ಯಾವುದೆಂದರೆ ಮೂಲ ದುರ್ಗ, ಅಗ್ನಿ ದುರ್ಗ, ಜಲದುರ್ಗ, ವನದುರ್ಗ, ಆಗ್ರಾದುರ್ಗ. ಇವೆಲ್ಲವೂ ಒಂದೇ ಪಾಣಿಪೀಠದಲ್ಲಿ ಸ್ಥಾಪಿತವಾಗಿವೆ. ಬಪ್ಪ ಬ್ಯಾರಿ ಮನೆತನದವರು ಇಲ್ಲಿ ಹೂವು – ಹಣ್ಣು ಅರ್ಪಿಸುತ್ತಾರೆ. ಇಲ್ಲಿ ಮತ ಬೇಧವಿಲ್ಲದೆ ಉತ್ಸವ ನಡೆಯುತ್ತದೆ. ಇಲ್ಲಿರುವ ಬೃಹತ್ ಡೋಲು ಬಪ್ಪನಾಡಿನ ಡೋಲೆಂದೇ ಪ್ರಸಿದ್ಧಿ ಪಡೆದಿದೆ.