ಕೇರಳದಲ್ಲಿ ಅಯ್ಯಪ್ಪನ 133 ಅಡಿ ಎತ್ತರದ ವಿಗ್ರಹ ಸ್ಥಾಪನೆಯಾಗುತ್ತಿದ್ದು, ಇದನ್ನು ಪತ್ತನಂತ್ತಿಟ್ಟ ನಗರದ ಮಧ್ಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ವಿಶ್ವದ ಅತಿ ದೊಡ್ಡ ಅಯ್ಯಪ್ಪ ಶಿಲ್ಪ ಇದಾಗಲಿದ್ದು, ಅಯ್ಯಪ್ಪನ ಜನ್ಮಸ್ಥಳ ಪಂದಳದಿಂದಲೂ ಇದನ್ನು ವೀಕ್ಷಿಸಬಹುದಾಗಿದೆ.
ಶ್ರೀರಾಮ – ಸೀತಾದೇವಿ ತಂಗಿದ್ದರೆಂದು ಹೇಳಲಾಗುವ ಈ ಪವಿತ್ರ ಸ್ಥಳ ಸಮುದ್ರಮಟ್ಟದಿಂದ 400 ಅಡಿ ಎತ್ತರದಲ್ಲಿದ್ದು, ಚುಟ್ಟಿಪಾರ ಮಹಾದೇವ ದೇವಸ್ಥಾನ ಟ್ರಸ್ಟ್ ಈ ಬೃಹತ್ ವಿಗ್ರಹವನ್ನು ಸ್ಥಾಪಿಸುತ್ತಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಶಿಲ್ಪಿ ದೇವದತ್ತ ನೇತೃತ್ವದಲ್ಲಿ ಅಯ್ಯಪ್ಪ ವಿಗ್ರಹದ ರಚನೆಯಾಗುತ್ತಿದ್ದು, ಮೊದಲ ಹಂತದ ಕಾಮಗಾರಿಗೆ 25 ಕೋಟಿ ರೂಪಾಯಿಗಳು ವೆಚ್ಚವಾಗಬಹುದೆಂದು ಹೇಳಲಾಗಿದೆ. ಮುಂದಿನ ನಾಲ್ಕೂವರೆ ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.