ಕರ್ನಾಟಕ ವಿಧಾನಸಭೆಗೆ ಕೂಡಲೇ ಚುನಾವಣಾ ದಿನಾಂಕ ಘೋಷಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ನಿಯೋಗ ತೆರಳಿ ಈ ಕುರಿತಂತೆ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನರೇಂದ್ರ ಮೋದಿ ಅವರನ್ನು ಕರೆಯಿಸಿಕೊಂಡು ತರಾತುರಿಯಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದಕ್ಕಾಗಿ ಜಾಹೀರಾತು ಸೇರಿದಂತೆ ಇತರ ಕಾರ್ಯಗಳಿಗೆ ಕೋಟಿಗಟ್ಟಲೆ ಹಣವನ್ನು ವ್ಯಯಿಸಲಾಗುತ್ತಿದೆ ಎಂದು ಆರೋಪಿಸಿದರು.
ಅಲ್ಲದೆ ಗುತ್ತಿಗೆ ಕಾಮಗಾರಿಗಳನ್ನು ನೀಡುವ ಮೂಲಕ ಹಣವನ್ನು ಲೂಟಿ ಹೊಡೆಯಲಾಗುತ್ತಿದೆ ಎಂದ ಅವರು, ಗುತ್ತಿಗೆದಾರರು ಸಹ ಕಮೀಷನ್ ನೀಡಬೇಡಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಎಲ್ಲವನ್ನು ತನಿಖೆಗೆ ಒಳಪಡಿಸುತ್ತೇವೆ ಎಂದು ಹೇಳಿದರು.
ಇನ್ನು 500 ರೂಪಾಯಿ ನೀಡಿ ಸಮಾವೇಶಕ್ಕೆ ಜನರನ್ನು ಕರೆದುಕೊಂಡು ಬರುವ ತಮ್ಮ ವಿಡಿಯೋ ವೈರಲ್ ಆದ ಕುರಿತಂತೆ ಸ್ಪಷ್ಟನೆ ನೀಡಿದ ಅವರು, ನರೇಂದ್ರ ಮೋದಿ ಅವರ ಬೆಳಗಾವಿ ಕಾರ್ಯಕ್ರಮಕ್ಕೆ ಸಾವಿರ ರೂಪಾಯಿ ನೀಡುವುದಾಗಿ ಜನರನ್ನು ಕರೆದುಕೊಂಡು ಬಂದು 500 ರೂಪಾಯಿ ನೀಡಿದ್ದರು. ಇದರ ವಿಡಿಯೋವನ್ನು ನೋಡಿ ನಾನು ಆ ವಿಚಾರ ಪ್ರಸ್ತಾಪಿಸಿದ್ದರೆ ಬಿಜೆಪಿಯವರು ಅದನ್ನು ತಿರುಚಿ ನಾನೇ ಹೇಳಿದ್ದೇನೆ ಎಂಬಂತೆ ಬಿಂಬಿಸಿದ್ದಾರೆ ಎಂದು ತಿಳಿಸಿದರು.