ಹಲವು ಬಗೆಯ ಫೇಸ್ ಪ್ಯಾಕ್ ಗಳನ್ನು ನೀವು ಬಳಸಿರಬಹುದು. ಕೆಲವು ಅದ್ಭುತ ಎನಿಸುವ ಪರಿಣಾಮ ಕೊಟ್ಟರೆ ಮತ್ತೆ ಕೆಲವು ನಿಧಾನಕ್ಕೆ ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಎಲ್ಲಾ ರೀತಿಯ ತ್ವಚೆಗಳಿಗೂ ಹೊಂದಿಕೊಳ್ಳುವ ಅತ್ಯುತ್ತಮ ಫೇಸ್ ಪ್ಯಾಕ್ ಎಂದರೆ ಕಿತ್ತಳೆ ಹಣ್ಣಿನ ಸಿಪ್ಪೆಯದ್ದು.
ಕಿತ್ತಳೆ ತಿಂದಾದ ಬಳಿಕ ಸಿಪ್ಪೆಯನ್ನು ಎಸೆಯದೆ ಒಟ್ಟು ಮಾಡಿ. ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಸಣ್ಣ ತುಂಡುಗಳಾಗಿ ಮಾಡಿ, ಮಿಕ್ಸಿಯಲ್ಲಿ ರುಬ್ಬಿ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಮುಚ್ಚಿಡಿ. ಬೇಕಾದಾಗ ಬಳಸಿ.
ಇದರ ಪೇಸ್ಟ್ ತಯಾರಿಸುವಾಗ ಕಿತ್ತಳೆ ಸಿಪ್ಪೆಯ ಪುಡಿಗೆ, ಒಂದು ಚಮಚ ಅಡುಗೆ ಸೋಡಾ ಬೆರೆಸಿ. ಬೆರಳು ಬಳಸಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಸ್ಕ್ರಬ್ ರೀತಿಯಲ್ಲಿ ತಿಕ್ಕಿ. ಇದರಿಂದ ಮುಖದ ಮೊಡವೆ ಸಮಸ್ಯೆ ದೂರವಾಗುತ್ತದೆ.
ಕಿತ್ತಳೆ ಸಿಪ್ಪೆಯ ಪುಡಿಗೆ ಶ್ರೀಗಂಧ ತೇದು ಬೆರೆಸಿ ಹಚ್ಚುವುದರಿಂದ ಮುಖದ ಕಲೆ ಸಮಸ್ಯೆ ದೂರವಾಗುತ್ತದೆ. ಇದಕ್ಕೆ ರೋಸ್ ವಾಟರ್ ಬೆರೆಸಿ ಹಚ್ಚಿಕೊಂಡರೆ ಮುಖದ ಸುಕ್ಕು, ನೆರಿಗೆಗಳು ಇಲ್ಲವಾಗುತ್ತವೆ.
ಈ ಪುಡಿಗೆ ಹಾಲು ಇಲ್ಲವೇ ಜೇನುತುಪ್ಪ ಬೆರೆಸಿ ಹಚ್ಚಿಕೊಂಡರೆ ಮುಖದ ತೇವಾಂಶ ಬಹುಕಾಲ ಉಳಿಯುವಂತೆ ನೋಡಿಕೊಳ್ಳುತ್ತದೆ. ಈ ಪೇಸ್ಟ್ ಅನ್ನು ಇಪ್ಪತ್ತು ನಿಮಿಷ ಹೊತ್ತು ಮುಖದ ಮೇಲೆ ಇಟ್ಟುಕೊಂಡರೆ ಸಾಕು, ಬಳಿಕ ಉಗುರು ಬೆಚ್ಚಗಿನ ನೀರಿನಲ್ಲೇ ಮುಖ ತೊಳೆಯುವುದನ್ನು ಮರೆಯದಿರಿ.