ಕೆಲವೊಬ್ಬ ಜನಪ್ರತಿನಿಧಿಗಳು ತಾವು ಯಾವುದಾದರೂ ಕ್ರೀಡಾಕೂಟಗಳಿಗೆ ತೆರಳಿದರೆ ಅದರಲ್ಲಿ ಸಾಂಕೇತಿಕವಾಗಿ ಪಾಲ್ಗೊಳ್ಳುವ ಮೂಲಕ ಉದ್ಘಾಟಿಸುವುದು ವಾಡಿಕೆ. ಉದಾಹರಣೆಗೆ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ಸಂದರ್ಭದಲ್ಲಿ ಬ್ಯಾಟ್ ಹಿಡಿದು ಒಂದೆರಡು ಬಾಲ್ ಗಳನ್ನು ಎದುರಿಸುತ್ತಾರೆ.
ಹಾಗೆಯೇ ಇಲ್ಲೊಬ್ಬ ಮಾಜಿ ಶಾಸಕರು ಕಬಡ್ಡಿ ಪಂದ್ಯಾವಳಿಯನ್ನು ಕಬಡ್ಡಿ ಆಡುವ ಮೂಲಕವೇ ಉದ್ಘಾಟಿಸಿದ್ದು ಎಲ್ಲರ ಗಮನ ಸೆಳೆದಿದೆ. ಬಾಗಲಕೋಟೆ ಜಿಲ್ಲೆ ಬೀಳಗಿಯ ಕಾಂಗ್ರೆಸ್ ಮಾಜಿ ಶಾಸಕ ಜೆ.ಟಿ. ಪಾಟೀಲ ಕಬಡ್ಡಿ ಆಡುವ ಮೂಲಕ ಪಂದ್ಯಾವಳಿ ಉದ್ಘಾಟಿಸಿದರು.
ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಇದರ ಉದ್ಘಾಟನೆಗಾಗಿ ಬಂದಿದ್ದ ಮಾಜಿ ಶಾಸಕ ಜೆ.ಟಿ. ಪಾಟೀಲ ‘ಕಬಡ್ಡಿ ಕಬಡ್ಡಿ ‘ ಎನ್ನುತ್ತಾ ಎದುರಾಳಿ ತಂಡದ ಓರ್ವ ಆಟಗಾರನನ್ನೂ ಔಟ್ ಮಾಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೀಳಗಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಜೆ.ಟಿ. ಪಾಟೀಲ, ತಮ್ಮ ಎದುರಾಳಿಗೆ ಚುನಾವಣೆಯಲ್ಲಿ ಯಾವ ಪಟ್ಟು ಹಾಕಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.