ಕೂದಲಿಗೆ ನಿತ್ಯ ಎಣ್ಣೆ ಹಚ್ಚುತ್ತೇನೆ, ಆದರೂ ಕೂದಲು ಉದುರುತ್ತದೆ ಎಂದು ಹೇಳುವವರನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣ ನೀವು ಮಾಡುವ ಕೆಲವು ತಪ್ಪುಗಳು. ಅವುಗಳು ಯಾವುವು ಗೊತ್ತೇ?
ಕೂದಲಿಗೆ ಎಣ್ಣೆ ಹಚ್ಚಿದ ತಕ್ಷಣ ಸ್ನಾನ ಮಾಡುವುದರಿಂದ ಅಥವಾ ತಲೆ ತೊಳೆದುಕೊಳ್ಳುವುದರಿಂದ ಎಣ್ಣೆಯ ಯಾವುದೇ ಪ್ರಯೋಜನಗಳು ನಿಮಗೆ ಲಭ್ಯವಾಗುವುದಿಲ್ಲ. ಅದರ ಬದಲು ಎಣ್ಣೆ ಹಚ್ಚಿ ಒಂದರಿಂದ ಎರಡು ಗಂಟೆಯೊಳಗೆ ಸ್ನಾನ ಮಾಡಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
ರಾತ್ರಿ ಎಣ್ಣೆ ಹಚ್ಚಿ ಬೆಳಿಗ್ಗೆ ಸ್ನಾನ ಮಾಡುವುದು ಮತ್ತೂ ಒಳ್ಳೆಯದು. ಆದರೆ ಎಣ್ಣೆ ಹಚ್ಚಿದಾಕ್ಷಣ ನಿಮ್ಮ ಕೂದಲನ್ನು ಗಟ್ಟಿಯಾಗಿ ಬಾಚಬೇಡಿ. ಆಗ ಕೂದಲು ಮೃದುವಾಗಿರುತ್ತದೆ. ನೀವು ಗಟ್ಟಿಯಾಗಿ ಬಾಚಿಕೊಂಡರೆ ಕೂದಲು ಒಡೆಯುವ ಅಥವಾ ತುಂಡಾಗುವ ಸಾಧ್ಯತೆಗಳು ಹೆಚ್ಚು.
ಮಸಾಜ್ ಮಾಡಿಕೊಳ್ಳುವುದು ನಿಮಗಿಷ್ಟವಿರಬಹುದು. ಹಾಗೆಂದು ಒಂದು ಗಂಟೆ ಹೊತ್ತು ಅಥವಾ ಎರಡು ಗಂಟೆ ಹೊತ್ತು ಮಸಾಜ್ ಮಾಡಿಸಿಕೊಳ್ಳದಿರಿ. ಹದಿನೈದು ನಿಮಿಷಕ್ಕಿಂತ ಹೆಚ್ಚು ಹೊತ್ತು ಕೂದಲಿನಲ್ಲಿ ಕೈ ಇರುವುದು ಒಳ್ಳೆಯದಲ್ಲ.
ಸಾಧ್ಯವಾದಷ್ಟು ಕಡಿಮೆ ರಾಸಾಯನಿಕ ಅಂಶಗಳನ್ನು ಬಳಸಿ ತಯಾರಿಸಿದ ಶಾಂಪೂವನ್ನೇ ಬಳಸಿ. ಸೀಗೆಕಾಯಿ ಬಳಸುವುದು ಭಾರಿ ಒಳ್ಳೆಯದು. ಆದರೆ ಇದರ ಲಭ್ಯತೆ ಎಲ್ಲರಿಗೂ ಸಿಗದು. ಹಾಗಾಗಿ ಗುಣಮಟ್ಟದ ಶಾಂಪೂ ಬಳಸಿ.