ಇಡ್ಲಿ, ದೋಸೆ ಮಾಡಿದಾಗ ಸಾಂಬಾರು ಇಲ್ಲವೇ ಕಾಯಿ ಚಟ್ನಿ ಮಾಡಿಕೊಂಡು ಸವಿಯುತ್ತಿರುತ್ತವೆ. ಇಲ್ಲಿ ಥಟ್ಟಂತ ರೆಡಿಯಾಗುವ ಬೆಳ್ಳುಳ್ಳಿ ಚಟ್ನಿ ವಿಧಾನವಿದೆ. ಒಮ್ಮೆ ಟ್ರೈ ಮಾಡಿ. ಇಡ್ಲಿ, ದೋಸೆ ಜತೆಗೆ ಒಳ್ಳೆಯ ಕಾಂಬಿನೇಷನ್ ಇದು.
ಒಂದು ಪ್ಯಾನ್ ಗೆ 2 ಚಮಚ ಎಣ್ಣೆ ಹಾಕಿಕೊಳ್ಳಿ. ಅದು ಬಿಸಿಯಾಗುತ್ತಲೇ 4 ಸಣ್ಣ ಈರುಳ್ಳಿ ಕತ್ತರಿಸಿ ಹಾಕಿಕೊಂಡು ಹುರಿಯಿರಿ. ಇದಕ್ಕೆ 20 ಎಸಳು ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ . 5 ಬ್ಯಾಡಗಿ ಮೆಣಸು ಇದೇ ಪ್ಯಾನ್ ಗೆ ಸೇರಿಸಿ ಈರುಳ್ಳಿ, ಬೆಳ್ಳುಳ್ಳಿ ಕೆಂಪಗಾಗುವವರೆಗೆ ಹುರಿಯಿರಿ.
ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಸಣ್ಣ ಲಿಂಬೆಹಣ್ಣಿನ ಗಾತ್ರದ ಹುಳಿ, ಸ್ವಲ್ಪ ಉಪ್ಪು, ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಗ್ಗರಣೆ ಪಾತ್ರೆ ಇಟ್ಟು ಅದಕ್ಕೆ1 ಚಮಚ ಎಣ್ಣೆ, ಸ್ವಲ್ಪ ಸಾಸಿವೆ, ಚಿಟಿಕೆ ಇಂಗು, ಸ್ವಲ್ಪ ಕರಿಬೇವು, ಒಂದು ಮೆಣಸು, ಸ್ವಲ್ಪ ಉದ್ದಿನ ಬೇಳೆ ಹಾಕಿ ಒಗ್ಗರಣೆ ತಯಾರಿಸಿ ಇದನ್ನು ಚಟ್ನಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.