
ಇಂಡೋನೇಷ್ಯಾದಲ್ಲಿ ಹೊಸದೊಂದು ಕೋವಿಡ್ ರೂಪಾಂತರ ಪತ್ತೆಯಾಗಿದೆ. ಇದು ಇದುವರೆಗೆ ದಾಖಲಾದ ವೈರಸ್‌ನ ಅತ್ಯಂತ ರೂಪಾಂತರಿತ ಆವೃತ್ತಿಯಾಗಿರಬಹುದು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ. ಡೆಲ್ಟಾದ ಮಾರ್ಫ್ಡ್ ಆವೃತ್ತಿ ಇದಾಗಿದ್ದು, ಜಕಾರ್ತದಲ್ಲಿ ರೋಗಿಯ ಸ್ವ್ಯಾಬ್‌ನಿಂದ ಇದನ್ನು ಸಂಗ್ರಹಿಸಲಾಗಿದೆ. ವಿಜ್ಞಾನಿಗಳ ಪ್ರಕಾರ 113 ವಿಶಿಷ್ಟ ರೂಪಾಂತರಗಳನ್ನು ವೈರಸ್ ಹೊಂದಿದೆ.
ಓಮಿಕ್ರಾನ್ ಸುಮಾರು 50 ರೂಪಾಂತರಗಳನ್ನು ಹೊಂದಿದೆ. ಈಗ ಪತ್ತೆಯಾಗಿರುವ ರೂಪಾಂತರಿ ಓಮಿಕ್ರಾನ್‌ನಲ್ಲಿ ಕಂಡುಬರುವ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು. ಆದರೆ ಇದು ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳಿಲ್ಲ ಎನ್ನುತ್ತಾರೆ ತಜ್ಞರು. ಜುಲೈ ಆರಂಭದಲ್ಲಿ ಜಾಗತಿಕ ಕೋವಿಡ್ ಜೀನೋಮಿಕ್ಸ್ ಡೇಟಾಬೇಸ್‌ಗೆ ಸಲ್ಲಿಸಲಾದ ಹೊಸ ವೈರಸ್, ದೀರ್ಘಕಾಲದ ಸೋಂಕಿನ ಪ್ರಕರಣದಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ.
ಈ ವೈರಸ್ ಅಂಟಿಕೊಂಡರೆ ಸೋಂಕು ತಿಂಗಳುಗಳವರೆಗೆ ವಿಸ್ತರಿಸಬಹುದು. ರೋಗನಿರೋಧಕ ವ್ಯವಸ್ಥೆಯು ದುರ್ಬಲಗೊಂಡ ರೋಗಿಗಳಲ್ಲಿ ಸಾಮಾನ್ಯವಾಗಿ ಇದು. ಏಡ್ಸ್ ಅಥವಾ ಕ್ಯಾನ್ಸರ್‌ಗೆ ಕೀಮೋಥೆರಪಿ ಚಿಕಿತ್ಸೆಗೆ ಒಳಗಾಗುವವರಲ್ಲಿ ಈ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯವಿರುವುದಿಲ್ಲ. ವಾರ್ವಿಕ್ ವಿಶ್ವವಿದ್ಯಾನಿಲಯದ ವೈರಾಲಜಿಸ್ಟ್ ಪ್ರೊಫೆಸರ್ ಲಾರೆನ್ಸ್ ಯಂಗ್, ಹೊಸದಾಗಿ ಪತ್ತೆಯಾದ ಸ್ಟ್ರೈನ್ ಇತರರಿಗೆ ಸೋಂಕು ಹರಡುವ ಸಾಮರ್ಥ್ಯವನ್ನು ಹೊಂದಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.
ಆದರೆ ಈ ರೀತಿಯ ಹೊಸ ರೂಪಾಂತರಗಳು ಸದ್ದಿಲ್ಲದೆ ಹೊರಹೊಮ್ಮುವ ಆತಂಕವಿರುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಪ್ರಮಾಣ ತಗ್ಗುತ್ತಿದ್ದಂತೆ ಬ್ರಿಟನ್‌ನಂತಹ ದೇಶಗಳು ಆನುವಂಶಿಕ ವಿಶ್ಲೇಷಣೆಯ ಪ್ರಮಾಣವನ್ನು ಕಡಿಮೆ ಮಾಡಿವೆ. ಈ ನಡುವೆಯೂ ಹೊಸ ಹೊಸ ರೂಪಾಂತರಿಗಳು ಪತ್ತೆಯಾಗುತ್ತಿದ್ದು, ವೈರಸ್‌ನೊಂದಿಗೆ ಜೀವಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ವೈರಸ್ ಹರಡಿದಂತೆ ಮತ್ತು ರೂಪಾಂತರಗೊಳ್ಳುವುದನ್ನು ಮುಂದುವರಿಸಿದಂತೆ, ಇದು ಅನಿವಾರ್ಯವಾಗಿ ಅತ್ಯಂತ ದುರ್ಬಲರಲ್ಲಿ ಗಂಭೀರವಾದ ಸೋಂಕುಗಳಿಗೆ ಕಾರಣವಾಗುತ್ತದೆ. 2021 ರಲ್ಲಿ ಬೃಹತ್ ಪ್ರಮಾಣದಲ್ಲಿ ಜಾಗತಿಕ ಕೊರೊನಾ ಪ್ರಕರಣಗಳು ಮತ್ತು ಸಾವುಗಳಿಗೆ ಕಾರಣವಾದ ಕೋವಿಡ್‌ನ ಡೆಲ್ಟಾ ಆವೃತ್ತಿಯು ಬಹುತೇಕ ಮರೆಯಾಗಿದೆ.