ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ಇದರ ಬಿಸಿ ಜನಪ್ರತಿನಿಧಿಗಳಿಗೆ ತಟ್ಟುತ್ತಿದೆ. ಯಾವುದೇ ಸಭೆ ಸಮಾರಂಭಗಳು ನಡೆಯಬೇಕೆಂದರೆ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಹೀಗೆ ಅನುಮತಿ ಪಡೆಯದೆ ನಡೆಯುತ್ತಿದ್ದ ಸಭೆಯೊಂದನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.
ಹೌದು, ಮಂಗಳವಾರದಂದು ತೀರ್ಥಹಳ್ಳಿ ಸಮೀಪದ ಕುರುವಳ್ಳಿಯ ವಿಶ್ವಕರ್ಮ ಸಮುದಾಯ ಭವನದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಆದರೆ ಇದಕ್ಕೆ ಯಾವುದೇ ಅನುಮತಿ, ಪಡೆದಿರಲಿಲ್ಲವೆಂದು ಹೇಳಲಾಗಿದೆ.
ಸಭೆ ನಡೆಯುತ್ತಿರುವ ಖಚಿತ ಮಾಹಿತಿ ಪಡೆದ ಚುನಾವಣೆ ನೀತಿ ಸಂಹಿತೆ ಅನುಷ್ಠಾನ ತಂಡದ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಅನುಮತಿ ಪತ್ರ ನೀಡುವಂತೆ ಕೇಳಿದ್ದಾರೆ. ಆದರೆ ಆಯೋಜಕರು ಇದನ್ನು ತೋರಿಸಲು ವಿಫಲರಾದ ಹಿನ್ನೆಲೆಯಲ್ಲಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.