ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಉಚಿತ ಅಕ್ಕಿ ಯೋಜನೆಗೆ ಹಿನ್ನಡೆಯಾಗಿದ್ದು, ಭಾರತೀಯ ಆಹಾರ ನಿಗಮ ಅಕ್ಕಿ ಪೂರೈಕೆಗೆ ನಿರಾಕರಿಸಿದೆ. ಹೀಗಾಗಿ ಛತ್ತೀಸ್ಗಡ ಸೇರಿದಂತೆ ಹಲವು ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿರುವ ಕರ್ನಾಟಕ, ಅಕ್ಕಿ ಪಡೆದುಕೊಳ್ಳಲು ಮಾತುಕತೆ ನಡೆಸುತ್ತಿದೆ.
ಇದರ ಮಧ್ಯೆ ಕೇಂದ್ರ ಸರ್ಕಾರ, ಅಕ್ಕಿ ಪೂರೈಕೆಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಮಂಗಳವಾರದಂದು ರಾಜ್ಯದಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿಯೂ ವಾಗ್ದಾಳಿ ನಡೆಸಿದೆ. ಕೊಟ್ಟ ಮಾತಿನಂತೆ ರಾಜ್ಯದ ಜನರಿಗೆ ಅಕ್ಕಿ ಪೂರೈಸಲು ಸಾಧ್ಯವಾಗದ ಸರ್ಕಾರ ವೃಥಾ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಗುಡುಗಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ನವದೆಹಲಿಯಲ್ಲಿ ಮಾತನಾಡಿರುವ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್, ಅಕ್ಕಿ ಪೂರೈಕೆ ಸ್ಥಗಿತ ಕುರಿತಂತೆ ಮಹತ್ವದ ಹೇಳಿಕೆ ನೀಡಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಧಾನ್ಯದ ಬೆಲೆ ಏರಿಕೆಯಾಗುದಂತೆ ನಿಗಾ ವಹಿಸಲು ಹಾಗೂ ಕೈಗೆಟುಕುವ ದರದಲ್ಲಿ ದೇಶದ ಜನತೆಗೆ ಸಿಗುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಅಕ್ಕಿ ನೀಡಲು ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ.