ಅಂತ್ಯಕ್ರಿಯೆಗೆ ತೆರಳುತ್ತಿದ್ದಾಗ ಹೆಜ್ಜೇನುಗಳು ದಾಳಿ ನಡೆಸಿದ್ದು, ಇದರಿಂದ ಕಂಗೆಟ್ಟ ಜನ ಶವವನ್ನು ರಸ್ತೆಯಲ್ಲೇ ಬಿಟ್ಟು ದಿಕ್ಕಾಪಾಲಾಗಿ ಓಡಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜಮ್ಮ ಎಂಬವರು ತೀರಿಕೊಂಡಿದ್ದ ಹಿನ್ನೆಲೆಯಲ್ಲಿ ಶವ ಸಂಸ್ಕಾರಕ್ಕಾಗಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮಾವಿನ ತೋಟಕ್ಕೆ ತೆರಳುತ್ತಿದ್ದರು. ಈ ವೇಳೆ ಕೆಲವರು ಮಾವಿನ ಕಾಯಿ ಕೀಳಲು ಹೋದಾಗ ಹೆಜ್ಜೇನುಗಳು ದಾಳಿ ನಡೆಸಿವೆ.
ಇದರಿಂದಾಗಿ ಕಂಗೆಟ್ಟ ಜನ ಶವವನ್ನು ಅಲ್ಲಿಯೇ ಬಿಟ್ಟು ದಿಕ್ಕಾಪಾಲಾಗಿ ಓಡಿದ್ದು, ಐದು ಗಂಟೆಗಳವರೆಗೆ ಶವ ರಸ್ತೆಯಲ್ಲೇ ಅನಾಥವಾಗಿ ಇತ್ತು ಎನ್ನಲಾಗಿದೆ. ಹೆಜ್ಜೇನು ದಾಳಿಯಿಂದ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರುಗಳಿಗೆ ಕೊಳ್ಳೇಗಾಲದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಕೆಲವರನ್ನು ಮೈಸೂರಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಇದಾದ ಬಳಿಕ ರಾಜಮ್ಮ ಕುಟುಂಬಸ್ಥರು ಹೊಗೆ ಹಾಕಿ ಜೇನನ್ನು ಓಡಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.