ನಿರ್ದೇಶಕ ನಂಜುಂಡೆಗೌಡರು ನಿರ್ದೇಶಿಸಿರುವ ರೈತರ ಜೀವನ ಆಧಾರಿತ “ಕಾಸಿನಸರ” ಸಿನಿಮಾವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್. ಆರ್. ಬಸವರಾಜಪ್ಪ ಹಾಗೂ ರೈತ ಸಂಘದ ಪದಾಧಿಕಾರಿಗಳು ಶಿವಮೊಗ್ಗದಲ್ಲಿ ಕುಟುಂಬ ಸಮೇತರಾಗಿ ವೀಕ್ಷಿಸಿದ್ದಾರೆ.
ಈ ಚಿತ್ರದ ನಿರ್ದೇಶಕ ನಂಜುಂಡೆಗೌಡರು ರೈತ ಸಂಘದ ಪ್ರಾರಂಭದಲ್ಲಿ ಸಕ್ರಿಯವಾಗಿ ರೈತ ಸಂಘದ ಹೋರಾಟಗಳಲ್ಲಿ ಭಾಗವಹಿಸಿದ್ದರು. ಆಗಲೇ ರೈತ ಚಳುವಳಿಯ ಬಗ್ಗೆ 3ರೀಲ್ ನ ಸಿನಿಮಾ ತೆಗೆದಿದ್ದರು, ಇದನ್ನು ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೂ ಮುಂಚೆ ಸೈಡ್ ರೀಲ್ ನಲ್ಲಿ ತೋರಿಸಲಾಗುತಿತ್ತು.
ಇವರ ಸಂಕ್ರಾಂತಿ, ಚುಕ್ಕಿ ಚಂದ್ರಮ, ನೋಡುಬಾ ನಮ್ಮೂರ ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ, ಹೆಬ್ಬೆಟ್ಟು ರಾಮಕ್ಕ ಸಿನಿಮಾಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ದೊರಕಿದೆ. ನವತಾರೆ, ನಾನು ಗಾಂಧಿ ಹೀಗೆ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ. ಈ ಎಲ್ಲಾ ಸಿನಿಮಾಗಳು ಹಳ್ಳಿ ಜನರ ಸಂಸ್ಕೃತಿ, ರೈತರ ಜೀವನ ಆಧರಿಸಿವೆ.
ಈಗಿನ ಕಾಸಿನಸರ ಸಿನಿಮಾ ಕೂಡ ವಿಶೇಷವಾಗಿ ರೈತರ ಇವತ್ತಿನ ಪರಿಸ್ಥಿತಿಯನ್ನ ಆಧರಿಸಿದೆ. ವಿದೇಶಿ ಕಂಪನಿಗಳು ರಾಜಕಾರಣಿಗಳ ಮೂಲಕ ಭೂಮಿಯನ್ನ ಹೇಗೆ ಕಬಳಿಸುತ್ತಾರೆ, ಅವುಗಳನ್ನ ರೈತರು ಚಳುವಳಿ ಮೂಲಕ ವಾಪಸ್ಸು ಪಡೆದಿದ್ದು ರೈತ ಚಳುವಳಿಯ ಶಕ್ತಿಯನ್ನ ತೋರಿಸುತ್ತದೆ. ಜೊತೆಗೆ ಸಾವಯವ ಕೃಷಿ ಮಹತ್ವ, ಕೌಟುಂಬಿಕ ಸಮಸ್ಯೆಗಳಿಂದ ಒಡೆದ ಕುಟುಂಬ ಒಂದುಗೂಡುವುದು, ರೈತ ಮುಖಂಡರ ಕಷ್ಟ ಕಾರ್ಪಣ್ಯಗಳನ್ನ ಸೂಕ್ಷ್ಮವಾಗಿ ಸೆರೆ ಹಿಡಿದಿದ್ದಾರೆ.
ಇದು ರೈತ ಹೋರಾಟಗಾರಾರು ಮತ್ತು ರೈತರು ನೋಡಲೇ ಬೇಕಾದ ಸಿನಿಮಾ, ಎಲ್ಲರೂ ತಪ್ಪದೆ ತಮ್ಮ ಕುಟುಂಬದೊಂದಿಗೆ ಹೋಗಿ ಈ ಸಿನಿಮಾ ವೀಕ್ಷಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ
ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಮನವಿ ಮಾಡಿದ್ದಾರೆ.