ತೆರಿಗೆ ವಿನಾಯಿತಿ ಪಡೆಯಲು ಪ್ರತಿಯೊಬ್ಬರೂ ಬಯಸುತ್ತಾರೆ. ಯಾಕಂದ್ರೆ ಭಾರತದಲ್ಲಿ ಬಡ, ಮಧ್ಯಮ ವರ್ಗದವರೇ ಹೆಚ್ಚಿದ್ದಾರೆ. ಕೆಲವರು ಬಾಡಿಗೆ ಮನೆಯಲ್ಲಿ ಬದುಕ್ತಾ ಇದ್ರೆ, ಇನ್ನು ಕೆಲವರು ಗೃಹ ಸಾಲ ಪಡೆದಿದ್ದಾರೆ. ಇನ್ನೊಂದಷ್ಟು ಮಂದಿ ಹೆತ್ತವರ ಮನೆಯಲ್ಲಿ ವಾಸಿಸುತ್ತಾರೆ.
ಮಾರ್ಚ್ 31ರ ಮೊದಲು ತೆರಿಗೆ ಉಳಿಸುವುದು ಹೇಗೆ ಎಂಬ ಟೆನ್ಷನ್ ಎಲ್ಲರಲ್ಲೂ ಇರುತ್ತದೆ. ಆದಾಯ ತೆರಿಗೆ ಉಳಿತಾಯ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಆದಾಯ ತೆರಿಗೆ ಕಾಯಿದೆಯಲ್ಲಿ HRA ಗೆ ಸಂಬಂಧಿಸಿದ ನಿಯಮಗಳು ಯಾವುವು ಮತ್ತು ಅದರ ಸಂಪೂರ್ಣ ಲಾಭವನ್ನು ನೀವು ಹೇಗೆ ಪಡೆಯುತ್ತೀರಿ ಎಂಬುದರ ಕುರಿತು ವಿವರಗಳು ಇಲ್ಲಿವೆ.
HRA ಎಂದರೆ ಮನೆ ಬಾಡಿಗೆ ಭತ್ಯೆ. ಅಂದರೆ ಕಂಪನಿಯು ಉದ್ಯೋಗಿಗೆ ಮನೆ ಬಾಡಿಗೆಯಾಗಿ ನೀಡುವ ಭತ್ಯೆ. ಪ್ರತಿಯೊಬ್ಬ ಖಾಸಗಿ ಮತ್ತು ಸರ್ಕಾರಿ ನೌಕರರು ಎಚ್ಆರ್ಎ ಪಡೆಯುತ್ತಾರೆ. ಇದು ನಿಮ್ಮ CTCಯ ಒಂದು ಭಾಗವಾಗಿದೆ. ಆದರೆ ಈ HRA ತೆರಿಗೆ ವಿನಾಯಿತಿ ಅಡಿಯಲ್ಲಿ ಬರುತ್ತದೆ, ಇದು ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ.
ಆದಾಯ ತೆರಿಗೆಯ ಸೆಕ್ಷನ್ 10 (13A) ಅಡಿಯಲ್ಲಿ ನೀವು HRA ನಲ್ಲಿ ವಿನಾಯಿತಿ ಪಡೆಯಬಹುದು. ಎಚ್ಆರ್ಎ ಕ್ಲೈಮ್ ಮಾಡಬೇಕಾದರೆ, ವೇತನಕ್ಕೆ ಮೂಲ ವೇತನ ಮತ್ತು ತುಟ್ಟಿಭತ್ಯೆ (ಡಿಎ) ಮಾತ್ರ ಸೇರಿಸಲಾಗುತ್ತದೆ.
ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಪ್ರತಿ ವರ್ಷ ಬಾಡಿಗೆ ರಶೀದಿಯನ್ನು ಸಲ್ಲಿಸುವ ಮೂಲಕ 1 ಲಕ್ಷ ರೂಪಾಯಿವರೆಗೆ ತೆರಿಗೆಯಲ್ಲಿ ರಿಯಾಯಿತಿಯನ್ನು ಪಡೆಯಬಹುದು. ಇದರೊಂದಿಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಬಾಡಿಗೆ ಒಪ್ಪಂದವನ್ನು ಸಹ ಸಲ್ಲಿಸಬೇಕಾಗುತ್ತದೆ. ಮಾಲೀಕರ ಪ್ಯಾನ್ ಕಾರ್ಡ್ ಸಹ ನೀಡಿದರೆ, ಬಾಡಿಗೆ ಮೊತ್ತವು ಮಾಲೀಕರ ಆದಾಯಕ್ಕೆ ಸೇರ್ಪಡೆಯಾಗುತ್ತದೆ. ಆಗ ಅದಕ್ಕೂ ತೆರಿಗೆ ಇರುತ್ತದೆ.
ಜನರು ತಮ್ಮ ಕನಸಿನ ಮನೆಯನ್ನು ಖರೀದಿಸಲು ಗೃಹ ಸಾಲವನ್ನು ತೆಗೆದುಕೊಳ್ಳುತ್ತಾರೆ. ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ, ಗೃಹ ಸಾಲದ ಸಂದರ್ಭದಲ್ಲಿ 1.5 ಲಕ್ಷದವರೆಗಿನ ಅಸಲು ಪಾವತಿಗೆ ವಿನಾಯಿತಿ ಪಡೆಯಬಹುದು. ಅಲ್ಲದೆ ಗೃಹ ಸಾಲದ ಮೇಲೆ ನೀವು ಪಾವತಿಸುತ್ತಿರುವ ಬಡ್ಡಿಯ ಸೆಕ್ಷನ್ 24B ಅಡಿಯಲ್ಲಿ, 2 ಲಕ್ಷದವರೆಗೆ ಹೆಚ್ಚುವರಿ ತೆರಿಗೆ ವಿನಾಯಿತಿಯನ್ನು ಪಡೆಯುತ್ತೀರಿ.
ಅಂದರೆ ನೀವು ಒಟ್ಟಾರೆ 3.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಜಂಟಿ ಗೃಹ ಸಾಲದ ಸಂದರ್ಭದಲ್ಲಿ, ಪ್ರತ್ಯೇಕ ತೆರಿಗೆ ವಿನಾಯಿತಿ ಲಭ್ಯವಿರುತ್ತದೆ. ಇದಕ್ಕಾಗಿ ನೀವು ಎಲ್ಲಾ ಸಂಬಂಧಿತ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಇನ್ನು ನೀವು ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದರೂ ಪ್ರತಿ ತಿಂಗಳು ಬಾಡಿಗೆ ಪಾವತಿಸುವ ಮೂಲಕ ತೆರಿಗೆ ಉಳಿಸಬಹುದು. ಆದರೆ ನೀವು ವಾಸ್ತವಿಕವಾಗಿ ಬಾಡಿಗೆಯನ್ನು ಪಾವತಿಸಬೇಕು ಮತ್ತು ಅದರ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ತಿಳಿಸಬೇಕು ಎಂಬ ಷರತ್ತು ಇದೆ. ವರ್ಷಕ್ಕೆ 1 ಲಕ್ಷಕ್ಕಿಂತ ಹೆಚ್ಚು ಬಾಡಿಗೆ ಇದ್ದರೆ, ಆದಾಯ ತೆರಿಗೆ ವಿನಾಯಿತಿಯ ಲಾಭ ಪಡೆಯಲು ಪೋಷಕರ ಪ್ಯಾನ್ ಸಂಖ್ಯೆಯನ್ನು ಸಹ ನಮೂನೆಯಲ್ಲಿ ಭರ್ತಿ ಮಾಡಬೇಕಾಗುತ್ತದೆ.
ಇದಲ್ಲದೆ, ಬಾಡಿಗೆ ಒಪ್ಪಂದದ ಪ್ರತಿಯನ್ನು ಸಹ ಲಗತ್ತಿಸಬೇಕಾಗುತ್ತದೆ. ಬಾಡಿಗೆ ಮೊತ್ತವನ್ನು ಪೋಷಕರ ಆದಾಯಕ್ಕೆ ಸೇರಿಸಲಾಗುತ್ತದೆ. ಬಾಡಿಗೆಯನ್ನು ಹೊರತುಪಡಿಸಿ ಬೇರೆ ಯಾವುದೇ ಆದಾಯದ ಮೂಲವನ್ನು ಹೊಂದಿಲ್ಲದಿದ್ದರೆ, ಅವರು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.