ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಇಂದು ವಿಧ್ಯುಕ್ತ ಚಾಲನೆ ಸಿಕ್ಕಿದೆ.
ಚಾಮುಂಡಿಬೆಟ್ಟದಲ್ಲಿ ಬೆಳಗ್ಗೆ 10 :10 ರಿಂದ 10 :40 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಸಾಹಿತಿ ಬಾನು ಮುಷ್ತಾಕ್ ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ , ಸಚಿವ ಹೆಚ್.ಸಿ ಮಹದೇವಪ್ಪ ಮತ್ತಿತರಿದ್ದರು.ದಸರಾ ಉದ್ಘಾಟನೆಗೂ ಮುನ್ನ ಬಾನು ಮುಷ್ತಾಕ್ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಉದ್ಘಾಟನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವಿ ಚಾಮುಂಡಿ ತಾಯಿ ದರ್ಶನ ಪಡೆದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ದಸರಾ ಉದ್ಘಾಟಕಿ ಲೇಖಕಿ ಬಾನು ಮುಷ್ತಾಕ್ ಹಾಗೂ ಅಧಿಕಾರಿಗಳು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ ಈಡುಗಾಯಿ ಒಡೆದು ದೇವಸ್ಥಾನ ಪ್ರವೇಶಿಸಿದರು.ಬಳಿಕ ನಾಡದೇವಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸಚಿವರು ಹಾಗೂ ದಸರಾ ಉದ್ಘಾತಕ ಲೇಖಕಿ ಬಾನು ಮುಷ್ತಾಕ್ ಉಪಸ್ಥಿತರಿದ್ದರು.
ಕಂಗೊಳಿಸುತ್ತಿದೆ ಮೈಸೂರು
ಈ ಬಾರಿಯ ದಸರಾಗೆ ಅರಮನೆ ನಗರಿ ಮೈಸೂರು ನವವಧುವಿನಂತೆ ಸಿಂಗಾರಗೊಂಡು ನಿಂತಿದೆ.
ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಬೀದಿಗಳು, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ನೋಡುಗರಿಗೆ ಉಣಬಡಿಸಲು ಎದುರುನೋಡುತ್ತಿರುವ ವೇದಿಕೆಗಳು, ತಳಿರು ತೋರಣಗಳಿಂದ ಸಿಂಗಾರಗೊಂಡ ಮೈಸೂರು ಅರಮನೆ ಹೀಗೆ ಇಡೀ ನಗರವೇ ಹೊಸರೂಪ ಪಡೆದು ಕಂಗೊಳಿಸುತ್ತಿದೆ. ಮೈಸೂರು ದಸರಾದ ಆಕರ್ಷಣೆಯ ಕೇಂದ್ರ ಬಿಂದುವಾದ ಅಂಬಾರಿ ಮೆರವಣಿಗೆಗೆ ಈಗಾಗಲೇ ಭರ್ಜರಿ ತಯಾರಿ ನಡೆದಿದೆ. ತಿಂಗಳ ಹಿಂದೆಯೇ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಗಜಪಡೆ ನಿತ್ಯದ ತಾಲೀಮ ಮುಗಿಸಿ, ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಹೊತ್ತು ಸಾಗಲು ಸರ್ವಸನ್ನದ್ಧಗೊಂಡಿದೆ. ಕರುನಾಡಿನ ಮನೆಮಕ್ಕಳಾಗಿರುವ ಅಭಿಮನ್ಯು – ಭೀಮನ ಜೋಡಿ ಈ ಬಾರಿಯ ಮೈಸೂರು ದಸರಾದ ಮೆರುಗು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ.
