ಹೆಚ್ಚಿನ ಪ್ರಮಾಣದಲ್ಲಿ ಸಿಹಿತಿಂಡಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ. ಆದರೆ ಸಕ್ಕರೆಯನ್ನು ಸಂಪೂರ್ಣ ತ್ಯಜಿಸುವುದು ಎಲ್ಲರಿಗೂ ಅಸಾಧ್ಯ. ಬೆಳಗ್ಗೆ ಸಕ್ಕರೆ ಬೆರೆಸಿದ ಚಹಾ ಕುಡಿಯುವ ಅಭ್ಯಾಸ ಅದೆಷ್ಟೋ ಜನರಿಗೆ ಇರುತ್ತದೆ. ಊಟವಾದ ಬಳಿಕ ಸಿಹಿ ತಿನಿಸುಗಳನ್ನು ಅನೇಕರು ಸವಿಯುತ್ತಾರೆ.
ಹಾಗಾಗಿ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಸಿಹಿಯನ್ನು ಸೇವನೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಬೇಕು. ವಿಶ್ವ ಆರೋಗ್ಯ ಸಂಸ್ಥೆ (WHO) ಈ ಬಗ್ಗೆ ಮಾರ್ಗಸೂಚಿಗಳನ್ನು ನೀಡಿದೆ.
WHO ಪ್ರಕಾರ ವಯಸ್ಕ ವ್ಯಕ್ತಿ ಒಂದು ದಿನದಲ್ಲಿ ಸೇವಿಸುವ ಒಟ್ಟು ಕ್ಯಾಲೊರಿಗಳಲ್ಲಿ ಸಕ್ಕರೆಯ ಪ್ರಮಾಣ 10 ಪ್ರತಿಶತಕ್ಕಿಂತ ಹೆಚ್ಚು ಇರಬಾರದು. ನೀವು ದಿನಕ್ಕೆ 2000 ಕ್ಯಾಲೊರಿಗಳನ್ನು ಸೇವಿಸಿದರೆ, ಸಕ್ಕರೆಯಿಂದ ಕೇವಲ 200 ಕ್ಯಾಲೋರಿಗಳು ಬರಬೇಕು. ಈ ಪ್ರಮಾಣವು ಸರಿಸುಮಾರು 50 ಗ್ರಾಂ ಸಕ್ಕರೆಗೆ ಸಮಾನವಾಗಿರುತ್ತದೆ. ಇದು ಸರಿಸುಮಾರು 12 ಟೀ ಚಮಚದಷ್ಟು ಸಕ್ಕರೆಯನ್ನು ಹೊಂದಿರುತ್ತದೆ.
ಸಕ್ಕರೆ ಕಡಿಮೆ ಸೇವಿಸುವುದು ಪ್ರಯೋಜನಕಾರಿ
ಸಕ್ಕರೆಯನ್ನು ಕಡಿಮೆ ಸೇವಿಸುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಅಂದರೆ 2000 ಕ್ಯಾಲೋರಿಗಳಲ್ಲಿ ಕೇವಲ 100 ಕ್ಯಾಲೋರಿಗಳು ಸಕ್ಕರೆಯಿಂದ ಬರಬೇಕು, ಇದು ಸರಿಸುಮಾರು 25 ಗ್ರಾಂ ಅಥವಾ 6 ಟೀ ಚಮಚ ಸಕ್ಕರೆಗೆ ಸಮಾನವಾಗಿರುತ್ತದೆ.
ಅಧಿಕ ಸಕ್ಕರೆ ಸೇವನೆಯು ಬೊಜ್ಜು, ಟೈಪ್ 2 ಡಯಾಬಿಟಿಸ್, ಹೃದ್ರೋಗ ಮತ್ತು ದಂತಕ್ಷಯ ಸೇರಿದಂತೆ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ಆಹಾರದಲ್ಲಿ ಸಕ್ಕರೆಯ ಪ್ರಮಾಣಕ್ಕೆ ಗಮನ ಕೊಡುವುದು ಬಹಳ ಮುಖ್ಯ.
ಸಕ್ಕರೆಯನ್ನು ಕಡಿಮೆ ಸೇವಿಸುವುದು ಸೇವಿಸುವುದು ಹೇಗೆ?
ಪ್ಯಾಕೆಟ್‌ಗಳಲ್ಲಿ ಬರುವ ರೆಡಿ ಟು ಈಟ್ ಫುಡ್‌ಗಳನ್ನು ಕಡಿಮೆ ಸೇವಿಸಿ. ತಂಪು ಪಾನೀಯಗಳ ಸೇವನೆ ಬೇಡ. ಟೆಟ್ರಾ ಪ್ಯಾಕ್‌ಗಳಲ್ಲಿ ಬರುವ ಜ್ಯೂಸ್‌ಗಳಿಗೆ ಕೂಡ ಹೆಚ್ಚು ಸಕ್ಕರೆಯನ್ನು ಸೇರಿಸಲಾಗುತ್ತದೆ. ನಿಮ್ಮ ಪಾನೀಯಗಳಿಗೆ ಸಕ್ಕರೆ ಸೇರಿಸುವ ಅಭ್ಯಾಸವನ್ನು ಕಡಿಮೆ ಮಾಡಿ. ತಾಜಾ ಹಣ್ಣುಗಳನ್ನು ಸೇವಿಸಿ. ಸಿಹಿತಿಂಡಿಗಳನ್ನು ಕಡಿಮೆ ತಿನ್ನಿ.