ಚಿಕ್ಕಮಗಳೂರು : ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಚಿರತೆಯೊಂದು ದಾಳಿ ನಡೆಸಿದ್ದು, ಅದೃಷ್ಟವಶಾತ್ ಇಬ್ಬರು ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಡೂರು ತಾಲೂಕಿನ ಸಿದ್ದರಹಳ್ಳಿ ಬಳಿ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಹೋಗುತ್ತಿದ್ದ ಮಂಜುನಾಥ್ ಹಾಗೂ ಮೂರ್ತಿ ಎಂಬುವವರ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಚಿರತೆ ಮೇಲೆ ಕಲ್ಲು ಹೊಡೆದು ಓಡಿಸಿದ್ದಾರೆ. ಚಿರತೆ ದಾಳಿಯಿಂದ ಗಾಯಗೊಂಡ ಇಬ್ಬರನ್ನು ಚಿಕ್ಕಮಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.