ಬೆಂಗಳೂರು: ವಾಹನ ಚಾಲನಾ ಕಲಿಕಾ ಪರವಾನಿಗೆ(LLR) ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರು 7 ದಿನಗಳ ಒಳಗೆ ಆನ್ಲೈನ್ ಮೂಲಕ ಕಲಿಕಾ ಪರೀಕ್ಷೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕಿದೆ. ಜನವರಿ 1ರಿಂದ ಈ ನಿಯಮ ಜಾರಿಗೆ ಬರಲಿದೆ.
ಎಲ್.ಎಲ್.ಆರ್.ಗೆ ಅರ್ಜಿ ಸಲ್ಲಿಸಿದವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿದ್ದಾರೆಯೇ ಎಂಬುದನ್ನು ಪರೀಕ್ಷೆಯ ಮೂಲಕ ಪತ್ತೆ ಮಾಡಲಾಗುವುದು. ಯಾವುದೇ ಸಮಸ್ಯೆ ಇಲ್ಲದವರಿಗೆ ವಾಹನ ಚಾಲನಾ ಕಲಿಕೆಗೆ ಪರವಾನಿಗೆ ಸಿಗುತ್ತದೆ.
ಎನ್ಐಸಿ ಅಭಿವೃದ್ದಿಪಡಿಸಿದ ಕೇಂದ್ರೀಕೃತ ವೆಬ್ ಆಧಾರಿತ ಸಾರಥಿ ತಂತ್ರಾಂಶದ ಮೂಲಕ ಆಧಾರ್, ಮೊಬೈಲ್ ಒಟಿಪಿ ಬಳಸಿಕೊಂಡು ಎಲ್.ಎಲ್.ಆರ್.ಗೆ ಅರ್ಜಿ ಸಲ್ಲಿಸಬೇಕಿದೆ. ನಿಗದಿತ ದಾಖಲೆಗಳನ್ನು ಅಪ್ಲೋಡ್ ಮಾಡಿ ಶುಲ್ಕ ಪಾವತಿಸಬೇಕು. ಪರವಾನಗಿ ಪ್ರಾಧಿಕಾರದವರು ಅರ್ಜಿ ಪರಿಶೀಲನೆ ನಡೆಸಿದ ನಂತರ 7 ದಿನಗಳ ಒಳಗೆ ಆನ್ಲೈನ್ ಮೂಲಕ ಪರೀಕ್ಷೆ ತೆಗೆದುಕೊಳ್ಳಬೇಕು. 7 ದಿನದ ಒಳಗೆ ಪರೀಕ್ಷೆ ತೆಗೆದುಕೊಳ್ಳದಿದ್ದಲ್ಲಿ ಅರ್ಜಿ ಸ್ವಯಂ ರದ್ದಾಗಲಿದೆ.
ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಡಿಸೆಂಬರ್ 31ರೊಳಗೆ ಕಲಿಕಾ ಪರಿಕ್ಷೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ಮಾಹಿತಿ ನೀಡಿದ್ದಾರೆ.
