ಬೆಂಗಳೂರು: 15 ವರ್ಷ ಪೂರ್ಣಗೊಂಡ ವಾಹನಗಳನ್ನು ಗುಜರಿಗೆ ಹಾಕುವ ನಿಯಮ ರಾಜ್ಯದಲ್ಲಿ ಏಪ್ರಿಲ್ 1 ರಿಂದ ಆರಂಭವಾಗಲಿದ್ದು, ಮೊದಲ ಹಂತದಲ್ಲಿ ಕಡ್ಡಾಯವಾಗಿ ಹಳೆವಾಹನ ಗುಜರಿ ಹಾಕುವ ನಿಯಮ ಜಾರಿಗೊಳಿಸುತ್ತಿಲ್ಲ.
ಮಾಲೀಕರು ಇಚ್ಛಿಸಿದರೆ ತಮ್ಮ ವಾಹನವನ್ನು ಗುಜರಿಗೆ ಹಾಕಬಹುದಾಗಿದೆ. 15 ವರ್ಷ ಪೂರ್ಣಗೊಂಡ ಹಳೆ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕುವಂತೆ ಬಲವಂತ ಇಲ್ಲ. ಬಳಕೆಯಾಗದೆ ಮನೆಯ ಮೂಲೆ ಸೇರಿದ ವಾಹನಗಳನ್ನು ಗುಜರಿಗೆ ಹಾಕಿದರೆ ಒಂದಷ್ಟು ಹಣ ಸಿಗುತ್ತದೆ. ಹೊಸ ವಾಹನ ಖರೀದಿಯಲ್ಲಿ ಶೇಕಡ 25 ರಷ್ಟು ತೆರಿಗೆ ವಿನಾಯಿತಿ ನೀಡಲಾಗುವುದು.
ಹಳೆ ವಾಹನ ಮಾಲೀಕರು ಹೊಸ ವಾಹನ ಖರೀದಿಸದಿದ್ದರೆ ತಮ್ಮಲ್ಲಿರುವ ರಿಯಾಯಿತಿಯ ಪತ್ರವನ್ನು ತಮ್ಮ ಸ್ನೇಹಿತರು, ಸಂಬಂಧಿಕರು, ಪರಿಚಿತರಿಗೆ ಕೊಟ್ಟು ಅವರು ಖರೀದಿಸಿದ ವಾಹನದ ಮೇಲೆ ರಿಯಾಯಿತಿ ಪಡೆಯಲು ಸಾರಿಗೆ ಇಲಾಖೆಯಿಂದ ಅವಕಾಶ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಗುಜರಿಗೆ ಹಾಕಲು ವಾಹನಗಳನ್ನು ನೀಡುವ ಮೊದಲು ವಾಹನದ ಮೇಲೆ ಯಾವುದೇ ಕ್ರಿಮಿನಲ್ ಕೇಸ್, ದಂಡ ಶುಲ್ಕ ಪಾವತಿ ಬಾಕಿ ಉಳಿದಿಲ್ಲವೆಂದು ಮುಚ್ಚಳಿಕೆ ಬರೆದು ಕೊಡಬೇಕು. ಮೊದಲಿಗೆ ವಾಹನ ಮಾಲೀಕರೇ ಸ್ವಯಂ ಪ್ರೇರಿತರಾಗಿ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನಿಯಮ ಜಾರಿಗೊಳಿಸಲಾಗುವುದು.
ಇನ್ನು ಸ್ಕ್ರಾಪಿಂಗ್ ಕೇಂದ್ರದ ಮಾಲೀಕರು ಗುಜರಿಗೆ ಹಾಕಿದ ವಾಹನದ ಚಾಸ್ಸಿ ನಂಬರ್ ಆರು ತಿಂಗಳು ಸುರಕ್ಷಿತವಾಗಿಡಬೇಕು. ವಾಹನದ ಎಲ್ಲಾ ಭೌತಿಕ ದಾಖಲೆಗಳನ್ನು ಎರಡು ವರ್ಷದವರೆಗೆ, ಸ್ಕ್ಯಾನ್ ದಾಖಲೆಗಳನ್ನು 10 ವರ್ಷದವರೆಗೆ ಸುರಕ್ಷಿತವಾಗಿರಬೇಕು ಎಂದು ಹೇಳಲಾಗಿದೆ.
ಕಾನೂನು ಬದ್ಧವಾಗಿ ಸ್ಥಾಪನೆಯಾದ ವ್ಯಕ್ತಿ, ಸಂಸ್ಥೆ, ಸೊಸೈಟಿಗಳು ಸ್ಕ್ರಾಪಿಂಗ್ ಕೇಂದ್ರ ಸ್ಥಾಪನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ವಾರ್ಷಿಕ 10 ಕೋಟಿ ರೂಪಾಯಿ ವ್ಯವಹಾರ ನಡೆಸುವ ಕಂಪನಿ ಅರ್ಜಿ ಸಲ್ಲಿಸಬಹುದು, ಸ್ಕ್ರ್ಯಾಪಿಂಗ್ ಕೇಂದ್ರ ಸ್ಥಾಪಿಸಲು ವಿಶಾಲವಾದ ಕನಿಷ್ಠ 5 ಎಕರೆ ಜಾಗ ಬೇಕು. ಒಂದು ಲಕ್ಷ ರೂ ಪ್ರೊಸೆಸಿಂಗ್ ಶುಲ್ಕ, 10 ಲಕ್ಷ ರೂ. ಠೇವಣಿ ಇಡಬೇಕು ಎಂದು ಹೇಳಲಾಗಿದೆ.