ನವದೆಹಲಿ: ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಬುಧವಾರ ನ್ಯಾಷನಲ್ ಕೋ ಆಪರೇಟಿವ್ ಆರ್ಗ್ಯಾನಿಕ್ಸ್ ಲಿಮಿಟೆಡ್ ನ ‘ಭಾರತ್ ಆರ್ಗ್ಯಾನಿಕ್ಸ್’ ಎನ್ನುವ ಹೊಸ ಬ್ರಾಂಡ್ ಬಿಡುಗಡೆ ಮಾಡಿದ್ದು, ಈ ಬ್ರಾಂಡ್ ಅಡಿಯಲ್ಲಿ ತೊಗರಿ, ಸಕ್ಕರೆ, ಕಡಲೆ, ಬಾಸ್ಮತಿ ಅಕ್ಕಿ, ಸೋನಾ ಮಸೂರಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.
ಪ್ರಸ್ತುತ 6 ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದ್ದು, ಡಿಸೆಂಬರ್ ವೇಳೆಗೆ ಒಟ್ಟು 20 ಉತ್ಪನ್ನಗಳು ಭಾರತ್ ಆರ್ಗ್ಯಾನಿಕ್ಸ್ ಬ್ರಾಂಡ್ ನಲ್ಲಿ ಲಭ್ಯವಾಗಲಿವೆ. ಮದರ್ ಡೈರಿಯ ಸಫಲ್ ಮಳಿಗೆಗಳು, ಆನ್ಲೈನ್ ನಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ದೇಶಾದ್ಯಂತ ರಿಟೇಲ್ ಮಾರಾಟ ಮಳಿಗೆಗಳ ಜಾಲವನ್ನು ಕೂಡ ಆರಂಭಿಸಲಾಗುವುದು.
ನ್ಯಾಷನಲ್ ಕೋ ಆಪರೇಟಿವ್ ಆರ್ಗ್ಯಾನಿಕ್ಸ್ ಲಿಮಿಟೆಡ್(NCOL) ಸಂಸ್ಥೆಯ ಲೋಗೋ, ವೆಬ್ಸೈಟ್ ಬಿಡುಗಡೆ ಮಾಡಲಾಗಿದೆ. ಆರ್ಗ್ಯಾನಿಕ್ಸ್ ಉತ್ಪನ್ನಗಳ ಮಾರಾಟದಿಂದ ಬರುವ ಲಾಭದಲ್ಲಿ ಶೇಕಡ 50 ರಷ್ಟನ್ನು ಸದಸ್ಯ ರೈತರ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ.
ದೇಶದಲ್ಲಿ ಸುಮಾರು 7.89 ಕೋಟಿ ಸಹಕಾರ ಸಂಘಗಳಿದ್ದು, 29 ಕೋಟಿ ಸದಸ್ಯರಿದ್ದಾರೆ. 27 ಲಕ್ಷ ಹೆಕ್ಟೇರ್ ಆರ್ಗ್ಯಾನಿಕ್ ಪ್ರಮಾಣ ಪತ್ರ ಪಡೆದ ಕೃಷಿ ಭೂಮಿ ಇದೆ. 29 ಲಕ್ಷ ಟನ್ ಪ್ರಮಾಣಿಕೃತ ಆರ್ಗ್ಯಾನಿಕ್ ಉತ್ಪನ್ನಗಳು 2022 -23ರಲ್ಲಿ ಉತ್ಪಾದನೆಯಾಗಿವೆ.
ಭಾರತದಲ್ಲಿ ಆರ್ಗಾನಿಕ್ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದು, ನಂತರ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಲಾಗುವುದು. ಇದಕ್ಕಾಗಿ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ.