ಬೆಂಗಳೂರು: ರಾಜ್ಯದ 25 ತಾಲೂಕುಗಳಲ್ಲಿ ಮಿನಿ ಜವಳಿ ಪಾರ್ಕ್ ಸ್ಥಾಪನೆ ಮಾಡಲಾಗುವುದು. ಅಮೆಜಾನ್, ಫ್ಲಿಪ್ಕಾರ್ಟ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ 25 ತಾಲೂಕುಗಳಲ್ಲಿ ಮಿನಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ವಿದ್ಯುತ್ ಮಗ್ಗ ನೇಕಾರರು ಮತ್ತು ಕಾರ್ಮಿಕರಿಗೆ ಡಿಬಿಟಿ ಮೂಲಕ ನೇಕಾರರ ಸಮ್ಮಾನ್ ಯೋಜನೆಯ ಸಹಾಯಧನ ವರ್ಗಾವಣೆಗೆ ಚಾಲನೆ ನೀಡಿದ ಸಿಎಂ, ಹತ್ತಿ ಸಂಸ್ಕರಣೆಯಿಂದ ಬಟ್ಟೆ ತಯಾರಿಕೆ, ಸಿದ್ಧ ಉಡುಪು ತಯಾರಿಕೆ ಸೇರಿದಂತೆ ಎಲ್ಲಾ ಹಂತಗಳ ಸೌಲಭ್ಯ ಒಳಗೊಂಡ ಮಿನಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಂಡು ನೇಕಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.
ನೇಕಾರರು ಉತ್ಪನ್ನಗಳ ಗುಣಮಟ್ಟ ಹೆಚ್ಚಿಸುವ ಮೂಲಕ ರಫ್ತು ಮಾಡಲು ಮುಂದಾಗಬೇಕು. ಡಿಜಿಟಲ್ ವೇದಿಕೆ ಮೂಲಕ ಮಾರುಕಟ್ಟೆ ವಿಸ್ತರಿಸಬೇಕು. ಇದಕ್ಕೆ ಕೈ ಮಗ್ಗ ಮತ್ತು ಜವಳಿ ಇಲಾಖೆ ಸಹಕಾರ ನೀಡಲಿದೆ. ಅಮೆಜಾನ್ ಫ್ಲಿಪ್ಕಾರ್ಟ್ ಮೊದಲಾದ ಆನ್ಲೈನ್ ವ್ಯಾಪಾರಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.