ನವದೆಹಲಿ: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಸತತ ಮೂರು ತ್ರೈಮಾಸಿಕಗಳಲ್ಲಿ ಹೆಚ್ಚಾಗಿದೆ. ಇದರ ಪರಿಣಾಮ ಅಂಚೆ ಕಚೇರಿಯ ಅವಧಿ ಠೇವಣಿಗಳ ಹೂಡಿಕೆ ಹೆಚ್ಚಾಗಿದೆ. ಎರಡು ವರ್ಷಗಳ ಅವಧಿ ಠೇವಣಿಗೆ ಶೇಕಡ 6.9ರಷ್ಟು ಬಡ್ಡಿ ನೀಡಲಾಗುತ್ತಿದೆ. ಬಹುತೇಕ ಬ್ಯಾಂಕ್ ಎಫ್‌ಡಿ ಗಳಲ್ಲಿಯೂ ಇಷ್ಟೇ ಬಡ್ಡಿ ನೀಡಲಾಗುತ್ತಿದೆ.
ಮೂರು ವರ್ಷಗಳ ಅವಧಿಯ ಅಂಚೆ ಕಚೇರಿ ಅವಧಿ ಠೇವಣಿ ಬಡ್ಡಿ ದರ ಶೇಕಡ 7ಕ್ಕೆ ಏರಿಕೆಯಾಗಿದೆ. ಈ ಮೊದಲು ಶೇಕಡ 5.5 ರಷ್ಟು ಇತ್ತು. ಎಸ್.ಬಿ.ಐ. ಎರಡು ವರ್ಷಕ್ಕಿಂತ ಹೆಚ್ಚಿನ ಮತ್ತು 3 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗೆ ಶೇಕಡ 7ರಷ್ಟು ಬಡ್ಡಿ ನೀಡುತ್ತಿದೆ.
ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಅಕ್ಟೋಬರ್ -ಡಿಸೆಂಬರ್ ತ್ರೈಮಾಸಿಕದಲ್ಲಿ ಗರಿಷ್ಠ ಶೇಕಡ 0.30 ವರೆಗೆ, ಜನವರಿ -ಮಾರ್ಚ್ ತ್ರೈಮಾಸಿಕದಲ್ಲಿ ಗರಿಷ್ಠ ಶೇ. 1.10 ವರೆಗೆ, ಪ್ರಸಕ್ತ ಏಪ್ರಿಲ್ -ಜೂನ್ ತ್ರೈಮಾಸಿಕ ಅವಧಿಗೆ ಗರಿಷ್ಠ ಶೇ. 0.70 ವರೆಗೆ ಹೆಚ್ಚಳ ಮಾಡಲಾಗಿದೆ.
ಇದಕ್ಕಿಂತ ಮೊದಲು ಸತತ 9 ತ್ರೈಮಾಸಿಕಗಳಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆರ್‌ಬಿಐ ರೆಪೊ ದರ ಹೆಚ್ಚಳ ಮಾಡಿದ ನಂತರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸತತ ಮೂರು ತ್ರೈಮಾಸಿಕಗಳಲ್ಲಿ ಹೆಚ್ಚಳ ಮಾಡಿದ್ದು, ಅಂಚೆ ಉಳಿತಾಯ ಯೋಜನೆಗಳಿಗೆ ಆಕರ್ಷಣೆ ಹೆಚ್ಚಾಗಿದೆ.