ಬೆಂಗಳೂರು: ರಾಜ್ಯದಲ್ಲಿ ವಾಹನ ಸ್ಕ್ರ್ಯಾಪಿಂಗ್ ಪ್ರಕ್ರಿಯೆ ಆರಂಭವಾಗಿದೆ. 15 ವರ್ಷ ತುಂಬಿದ ಸರ್ಕಾರಿ ಮತ್ತು ಖಾಸಗಿ ವಾಹನಗಳ ಗುಜರಿಗೆ ಹಾಕುವ ಪ್ರಕ್ರಿಯೆ ಆರಂಭವಾಗಿದ್ದು, ಪ್ರಸ್ತುತ ರಾಜ್ಯದಲ್ಲಿ 15 ವರ್ಷ ಮೀರಿದ 14.3 ಲಕ್ಷ ವಾಹನಗಳು ಗುಜರಿ ಸೇರಲಿವೆ ಎಂದು ಹೇಳಲಾಗಿದೆ.
ಹಳೆಯ ವಾಹನಗಳನ್ನು ನಾಶಪಡಿಸಲು ಅಗತ್ಯವಾದ ನೋಂದಾಯಿತ ವಾಹನಗಳ ಗುಜರಿ ಕೇಂದ್ರಗಳ ಸ್ಥಾಪನೆಗೆ ಸಲ್ಲಿಸಿದ್ದ ಗುಜರಿ ನೀತಿ ಕರಡು ಯೋಜನೆ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಖಾಸಗಿ ವ್ಯಕ್ತಿಗಳು, ಸಂಘ ಸಂಸ್ಥೆಗಳಿಂದ ಸಾರಿಗೆ ಇಲಾಖೆ ಅರ್ಜಿಗಳನ್ನು ಆಹ್ವಾನಿಸಲು ಮುಂದಾಗಿದೆ.
ಹಳೆಯ ವಾಹನ ಗುಜರಿಗೆ ಹಾಕಿದಲ್ಲಿ ವಾಹನ ಮಾಲೀಕರಿಗೆ ಸಿಒಡಿ ಪ್ರಮಾಣ ಪತ್ರ ನೀಡಲಾಗುತ್ತದೆ. ಹೊಸ ವಾಹನ ಖರೀದಿಸುವ ಸಂದರ್ಭದಲ್ಲಿ ಸಾರಿಗೇತರ ವಾಹನಕ್ಕೆ 25 ರಷ್ಟು, ಸಾರಿಗೆ ವಾಹನಕ್ಕೆ ಶೇಕಡ 15 ರಷ್ಟು ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಈ ವಿನಾಯಿತಿ ಸಾರಿಗೇತರ ವಾಹನಕ್ಕೆ 15 ವರ್ಷದವರೆಗೆ, ಸಾರಿಗೆ ವಾಹನಕ್ಕೆ 8 ವರ್ಷದವರೆಗೆ ಇರಲಿದೆ. ದೇಶಾದ್ಯಂತ ಸುಮಾರು 1.2 ಕೋಟಿ ಹಳೆಯ ವಾಹನಗಳು ಗುಜರಿ ಸೇರಲಿವೆ ಎಂದು ಹೇಳಲಾಗಿದೆ.
ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡಲು ನೋಂದಣಿ ಶುಲ್ಕ ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. 15 ವರ್ಷ ಮೇಲ್ಪಟ್ಟ ವಾಹನಗಳಿಗೆ ಹಸಿರು ತೆರಿಗೆ ವಿಧಿಸಲಾಗುತ್ತದೆ. 15 ವರ್ಷ ಮೇಲ್ಪಟ್ಟ ಸಾರಿಗೇತರ ವಾಹನಗಳಿಗೆ, 7 ವರ್ಷ ಪೂರ್ಣಗೊಳಿಸಿದ ಸಾರಿಗೆ ವಾಹನಗಳಿಗೆ ಆರ್‌ಸಿ ನವೀಕರಣದ ಸಂದರ್ಭದಲ್ಲಿ ಕರ್ನಾಟಕ ಮೋಟಾರ್ ವಾಹನ ತೆರಿಗೆ ಕಾಯ್ದೆ ಅನ್ವಯ ಗ್ರೀನ್ ಟ್ಯಾಕ್ಸ್ ವಿಧಿಸಲಾಗುವುದು.