ನವದೆಹಲಿ: ಶೇ. 93 ರಷ್ಟು 2,000 ರೂಪಾಯಿ ಕರೆನ್ಸಿ ನೋಟುಗಳು ಬ್ಯಾಂಕ್ ಗಳಿಗೆ ಹಿಂತಿರುಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಮಾಹಿತಿ ನೀಡಿದೆ.
ಈಗ 0.24 ಲಕ್ಷ ಕೋಟಿ ರೂಪಾಯಿ 2 ಸಾವಿರ ರೂ. ನೋಟುಗಳು ಮಾತ್ರ ಸಾರ್ವಜನಿಕರ ಬಳಿ ಉಳಿದಿವೆ ಎಂದು ಬ್ಯಾಂಕ್ ತಿಳಿಸಿದೆ.
ಬ್ಯಾಂಕ್ ಗಳಿಂದ ಪಡೆದ ಮಾಹಿತಿಯ ಪ್ರಕಾರ, ಚಲಾವಣೆಯಿಂದ ಮರಳಿ ಪಡೆದ 2000 ರೂಪಾಯಿಗಳ ನೋಟುಗಳ ಒಟ್ಟು ಮೌಲ್ಯವು ಆಗಸ್ಟ್ 31, 2023 ರವರೆಗೆ 3.32 ಲಕ್ಷ ಕೋಟಿ ರೂಪಾಯಿಯಾಗಿದೆ ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಪರಿಣಾಮವಾಗಿ, ಆಗಸ್ಟ್ 31, 2023 ರಂದು ವ್ಯವಹಾರದ ಮುಕ್ತಾಯದ ವೇಳೆಗೆ ಚಲಾವಣೆಯಲ್ಲಿರುವ 2000 ರೂ. ಬ್ಯಾಂಕ್ ನೋಟುಗಳು 0.24 ಲಕ್ಷ ಕೋಟಿ ರೂ.ಗಳಷ್ಟಿದ್ದವು. ಹೀಗಾಗಿ, ಮೇ 19, 2023 ರಂತೆ ಚಲಾವಣೆಯಲ್ಲಿರುವ 2000 ರೂ. ಬ್ಯಾಂಕ್ ನೋಟುಗಳಲ್ಲಿ 93 ಪ್ರತಿಶತವು ಹಿಂತಿರುಗಿವೆ.
ಪ್ರಮುಖ ಬ್ಯಾಂಕ್ ಗಳಿಂದ ಸಂಗ್ರಹಿಸಿದ ಮಾಹಿತಿಯು ಚಲಾವಣೆಯಿಂದ ಮರಳಿ ಪಡೆದ 2000 ರೂ. ಮುಖಬೆಲೆಯ ಒಟ್ಟು ನೋಟುಗಳಲ್ಲಿ ಸುಮಾರು 87 ಪ್ರತಿಶತದಷ್ಟು ಠೇವಣಿ ರೂಪದಲ್ಲಿದೆ. ಉಳಿದ ಸುಮಾರು 13 ಪ್ರತಿಶತವು ಇತರ ಮುಖಬೆಲೆಯ ಬ್ಯಾಂಕ್ ನೋಟುಗಳಿಗೆ ವಿನಿಮಯವಾಗಿದೆ.
ಮೇ 19, 2023 ರಂದು ಚಲಾವಣೆಯಲ್ಲಿರುವ 2000 ರೂಪಾಯಿ ನೋಟುಗಳನ್ನು ಹಿಂಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿತ್ತು.
ಸೆಪ್ಟೆಂಬರ್ 30, 2023 ರವರೆಗೆ ಸಾರ್ವಜನಿಕರಿಗೆ 2 ಸಾವಿರ ರೂ. ನೋಟು ಠೇವಣಿ ಮಾಡಲು, ವಿನಿಮಯ ಮಾಡಿಕೊಳ್ಳಲು ಆರ್ಬಿಐ ವಿನಂತಿಸಿದೆ.