ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೀ ನೀಡಬೇಕು ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ. ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಸಚಿವ ಬೈರತಿ ಸುರೇಶ್ ಅವರಿಂದಲೇ ಹಗರಣದ ಕಡತ ತಿದ್ದಿರುವ ಗುಮಾನಿ ಇದೆ. ಎಲ್ಲಾ ಕಡತಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ.
3 ಲಕ್ಷ ಪರಿಹಾರಕ್ಕೆ ಬದಲಾಗಿ 35 ಕೋಟಿ ಆಸ್ತಿ! ತಮ್ಮ ಕುರ್ಚಿ ಇನ್ನು ಜಾಸ್ತಿ ದಿನ ಉಳಿಯೋದಿಲ್ಲ ಎಂದು ಗ್ಯಾರೆಂಟಿ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅಧಿಕಾರದ ಕಡೆಯ ದಿನಗಳಲ್ಲಿ ಯದ್ವಾತದ್ವಾ ಲೂಟಿ ಮಾಡಿ ಮಗನ ಭವಿಷ್ಯ ಭದ್ರ ಮಾಡಲು ಹೊರಟಿದ್ದಾರೆ. ಬರೋಬ್ಬರಿ 4,000 ಕೋಟಿ ಮೊತ್ತದ ಮೈಸೂರಿನ ಮುಡಾ ಹಗರಣ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಭ್ರಷ್ಟಾಚಾರವಾಗಿದ್ದು ಸಿಎಂ ಸಿದ್ದರಾಮಯ್ಯ ರಾಜ್ಯದ ಅತ್ಯಂತ ಕಡು ಭ್ರಷ್ಟ ಸಿಎಂ ಎಂಬ ಕುಖ್ಯಾತಿಗೆ ಪಾತ್ರರಾಗಲಿದ್ದಾರೆ ಎಂದು ಕಿಡಿಕಾರಿದ್ದಾರೆ.
3 ಲಕ್ಷ ಬೆಲೆಬಾಳುವ ಜಮೀನಿನ ಬದಲಿಗೆ ಮೈಸೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ 30 ಕೋಟಿ ರೂಪಾಯಿ ಬೆಲೆಬಾಳುವ 14 ಸೈಟು ಲಪಟಾಯಿಸಿರುವ ಸಿಎಂ ಸಿದ್ದರಾಮಯ್ಯ, ನಾಳೆ ಸಿದ್ಧರಾಮನಹುಂಡಿಯ ಕೆರೆಯನ್ನೋ ಗೋಮಾಳವನ್ನೋ ಗೋಲ್ಮಾಲ್ ಮಾಡಿ ಅಂಬಾ ವಿಲಾಸ ಅರಮನೆಯನ್ನೇ ತಮ್ಮ ಹೆಸರಿಗೆ ಬರೆಸಿಕೊಂಡರೂ ಅಚ್ಚರಿ ಇಲ್ಲ.
ಅಧಿಕಾರ ಬಿಟ್ಟು ಹೋಗುವ ಮುನ್ನ ಹತ್ತು ತಲೆ ಮಾರಿಗಾಗುವಷ್ಟು ಆಸ್ತಿ ಮಾಡಲು ನಿಶ್ಚಯ ಮಾಡಿರುವ ಸಿಎಂ ಸಿದ್ದರಾಮಯ್ಯನವರ ಆಡಳಿತದಲ್ಲಿ ಕನ್ನಡಿಗರಿಗೆ ಭ್ರಷ್ಟಾಚಾರದ ಭಾಗ್ಯ, ಲೂಟಿಯ ಗ್ಯಾರೆಂಟಿ ಬಿಟ್ಟರೆ ಬೇರೇನೂ ಸಿಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಡಾದಿಂದ ಸಿಎಂ ಪತ್ನಿ ಹೆಸರಿಗೆ 14 ನಿವೇಶನಗಳು ಮುಂಜೂರಾಗಿವೆ. ನಾಲ್ಕು ಸಾವಿರ ಕೋಟಿ ಮೊತ್ತದ ಹಗರಣ ನಡೆದಿದೆ. ಸಚಿವ ಬೈರತಿ ಸುರೇಶ್ ಅವರು ಎಲ್ಲಾ ಕಡತಗಳನ್ನು ಎತ್ತಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಸಚಿವರಿಂದಲೇ ಕಡತ ತಿದ್ದುವ ಯತ್ನ ನಡೆದಿದೆ ಎಂಬ ಗುಮಾನಿ ಇದೆ. ಎಲ್ಲಾ ಕಡತಗಳ ಬಗ್ಗೆ ನಿವೇಶನಗಳ ಬಗ್ಗೆ ಸಿಎಂ ಸಿದ್ದರಾಮಯ್ಯನವರೇ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ.