ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ ಬಂಪರ್ ಬೆಲೆ ಇದೆ. ಹೀಗಾಗಿ ರೈತರು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಧಾನ್ಯ ಖರೀದಿ ಕೇಂದ್ರಗಳಿಂದ ದೂರ ಉಳಿದಿದ್ದಾರೆ.
ಬರದ ನಡುವೆಯೂ ಮಂಡ್ಯ ಜಿಲ್ಲೆಯಲ್ಲಿ ಭತ್ತದ ಫಸಲು ಉತ್ತಮವಾಗಿದ್ದು, ರೈತರು ಉತ್ತಮ ಫಸಲು ಬಂದಿರುವುದರಿಂದ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಭತ್ತಕ್ಕೆ ಹಿಂದಿನ ವರ್ಷಗಳಲ್ಲಿ ಕಡಿಮೆ ದರ ಇದ್ದ ಕಾರಣ ರೈತರು ಖರೀದಿ ಕೇಂದ್ರಗಳನ್ನು ತೆರೆಯುವಂತೆ ಒತ್ತಡ ಹೇರುತ್ತಿದ್ದರು. ಈಗ ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ ಬಂಪರ್ ಬೆಲೆ ಬಂದಿದೆ. ಕನಿಷ್ಠ ಬೆಂಬಲ ಬೆಲೆಗಿಂತಲೂ ಹೆಚ್ಚಿನ ಹಣ ಕೊಟ್ಟು ವರ್ತಕರು ಜಮೀನುಗಳಲ್ಲಿಯೇ ಭಕ್ತ ಖರೀದಿಸತೊಡಗಿದ್ದಾರೆ.
ಕಳೆದ ವರ್ಷ 1,800 ರಿಂದ 2000 ರೂ. ಇದ್ದ ದಪ್ಪ ಭತ್ತಕ್ಕೆ ಈ ವರ್ಷ 2100 ರೂ.ನಿಂದ 2200 ರೂ. ದರ ಇದೆ. ಸಣ್ಣ ಭತ್ತಕ್ಕೆ 2100 ರೂ.ನಿಂದ 2300 ರೂ. ದರ ಇತ್ತು. ಈ ವರ್ಷ 2700 ರಿಂದ 3000 ರೂ. ವರೆಗೂ ದರ ಇದೆ. ಹೀಗಾಗಿ ರೈತರು ಜಮೀನಿನಲ್ಲೇ ದಲ್ಲಾಳಿಗಳು ವರ್ತಕರಿಗೆ ಮಾರಾಟ ಮಾಡತೊಡಗಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಸರ್ಕಾರ ಪ್ರತಿ ಕ್ವಿಂಟಲ್ ಸಾಮಾನ್ಯ ಭತ್ತಕ್ಕೆ 2183 ರೂ., ಎ ಗ್ರೇಡ್ ಭತ್ತಕ್ಕೆ 2203 ರೂ. ದರ ನಿಗದಿಪಡಿಸಿದೆ. ಒಣಗಿಸಿದ ಭತ್ತವನ್ನು ರೈತರೇ ಖರೀದಿ ಕೇಂದ್ರಗಳಿಗೆ ತಂದು ಕೊಡಬೇಕು. ಸಾಗಣೆ, ಚೀಲದ ವೆಚ್ಚ ಭರಿಸಬೇಕು. ಆದರೆ, ವರ್ತಕರು ಜಮೀನುಗಳಲ್ಲಿ ಖರೀದಿಸಿ ಕನಿಷ್ಠ ಬೆಂಬಲ ಬೆಲೆಗಿಂತಲೂ ಹೆಚ್ಚಿನ ದರ ನೀಡುತ್ತಾರೆ. ಇದರಿಂದಾಗಿ ರೈತರು ಜಮೀನುಗಳಲ್ಲಿಯೇ ಭತ್ತ ಮಾರಾಟ ಮಾಡತೊಡಗಿದ್ದಾರೆ.
ಆದರೆ ರಾಗಿಗೆ ಎಂ.ಎಸ್.ಪಿ. ದರ ಹೆಚ್ಚಾಗಿದೆ. ಮುಕ್ತ ಮಾರುಕಟ್ಟೆಗಿಂತ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ರಾಗಿಗೆ 3846 ರೂಪಾಯಿ ದರ ಇದ್ದು, ರಾಗಿ ಪೂರೈಸಲು ರೈತರು ನೋಂದಣಿ ಮಾಡಿಕೊಂಡಿದ್ದಾರೆ.