ನವದೆಹಲಿ: ಮಾರುಕಟ್ಟೆ ದರ ಅಥವಾ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ರೈತರಿಂದ ನೇರವಾಗಿ ತೊಗರಿ ಖರೀದಿಸಲು ಕೇಂದ್ರ ಸರ್ಕಾರ ಹೊಸ ವೆಬ್ಸೈಟ್ ಆರಂಭಿಸಿದೆ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ತೊಗರಿ ಖರೀದಿಗೆ www.esamridhi.in ಪೋರ್ಟಲ್ ಲೋಕಾರ್ಪಣೆ ಮಾಡಿದ್ದಾರೆ.
ಸದ್ಯ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಕೇಂದ್ರ ಸರ್ಕಾರ ದೇಶದ ವಿವಿಧೆಡೆ ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರಿಂದ ತೊಗರಿ ಖರೀದಿಸುತ್ತಿದೆ. ಇನ್ನು ಮುಂದೆ ರೈತರು ತೊಗರಿ ಬೆಳೆಯುವ ಮೊದಲೇ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ ಅಥವಾ ಕೃಷಿ ಉತ್ಪಾದಕ ಕೇಂದ್ರಗಳ ಮೂಲಕ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಬೆಳೆ ಬಂದ ನಂತರ ನಾಫೆಡ್ ಅಥವಾ ಎನ್.ಸಿ.ಸಿ.ಎಫ್.ಗಳಿಗೆ ಪೋರ್ಟಲ್ ನಲ್ಲಿ ಮಾರಾಟ ಮಾಡಬಹುದು. ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ ನೇರವಾಗಿ ರೈತರ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಅಲ್ಲದೇ, ನೊಂದಾಯಿಸಿಕೊಂಡ ರೈತರು ಮುಕ್ತ ಮಾರುಕಟ್ಟೆಯಲ್ಲಿಯೂ ತೊಗರಿ ಮಾರಾಟ ಮಾಡಲು ಅವಕಾಶವಿದೆ.
ಆಹಾರ ಭದ್ರತೆಗಾಗಿ ಹೆಚ್ಚುವರಿ ದಾಸ್ತಾನು ಮಾಡಲು ಕೇಂದ್ರ ಸರ್ಕಾರ ಈ ಪೋರ್ಟಲ್ ಮೂಲಕ ರೈತರಿಂದ ತೊಗರಿ ಖರೀದಿಸಲಿದ್ದು, ರೈತರ ನೊಂದಾಯಿಸಿಕೊಂಡು ಕನಿಷ್ಠ ಬೆಂಬಲ ಬೆಲೆ, ಮಾರುಕಟ್ಟೆ ಬೆಲೆಗಳಲ್ಲಿ ಯಾವುದು ಹೆಚ್ಚಿದೆಯೋ ಆ ಬೆಲೆಗೆ ತಮ್ಮ ತೊಗರಿ ಮಾರಾಟ ಮಾಡಬಹುದು. ಅದರ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಸಂದಾಯ ಮಾಡಲಾಗುತ್ತದೆ.
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಜಾರ್ಖಂಡ್, ಗುಜರಾತ್ ನಲ್ಲಿ ತೊಗರಿ ಬೆಳೆಯುತ್ತಿದ್ದು, ರೈತರಿಗೆ ಈ ಪೋರ್ಟಲ್ ನಿಂದ ರೈತರಿಗೆ ಅನುಕೂಲವಾಗುತ್ತದೆ.