ಬೆಳಗಾವಿ: ವಿದ್ಯುತ್ ದರ ಹೆಚ್ಚಳದ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸುತ್ತಿದ್ದು, ಒಂದೆರಡು ದಿನಗಳಲ್ಲಿ ದರ ಕಡಿಮೆ ಆಗುವ ಸಾಧ್ಯತೆ ಕಂಡು ಬರುತ್ತಿದೆ ಎಂದು ಹೆಸ್ಕಾಂ ಎಂಡಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಬೆಳಗಾವಿಯ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಉದ್ಯಮಿಗಳೊಂದಿಗೆ ಸಭೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇಂಧನ ಸಚಿವರು, ಉನ್ನತ ಅಧಿಕಾರಿಗಳು ವಿದ್ಯುತ್ ದರ ಹೆಚ್ಚಳ ಸಮಸ್ಯೆ ಬಗ್ಗೆ ಚರ್ಚೆ ನಡೆಸುತ್ತಿದ್ದು, ದರ ಇಳಿಕೆ ಬಗ್ಗೆ ಬುಧವಾರ ಅಥವಾ ಗುರುವಾರ ನಿರ್ದೇಶನ ಬರಬಹುದು ಎಂದು ಹೇಳಿದ್ದಾರೆ.
ಫ್ಯೂಯಲ್ ಕಾಸ್ಟ್ ಅಡ್ಜಸ್ಟ್ ಮೆಂಟ್ ಈ ತಿಂಗಳು, ಮುಂದಿನ ತಿಂಗಳು ಮಾತ್ರ ಇರುತ್ತದೆ. ನಂತರ ದರ ಕಡಿಮೆ ಆಗುತ್ತೆ ಎಂದು ಅವರು ತಿಳಿಸಿದ್ದಾರೆ.
ಫ್ಯೂಯಲ್ ಕಾಸ್ಟ್ ಅಡ್ಜಸ್ಟ್ ಮೆಂಟ್ ಎರಡು ತಿಂಗಳು ಮಾತ್ರ ಇರುತ್ತದೆ. ಇದಾದ ಬಳಿಕ ದರ ಕಡಿಮೆ ಆಗುತ್ತಾ ಹೋಗುತ್ತದೆ ಎಂದು ಸ್ಪಷ್ಟನೆ ನೀಡಿದ್ದೇನೆ ಎಂದು ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಸಿದ ಬಳಿಕ ಮೊಹಮ್ಮದ್ ರೋಷನ್ ಹೇಳಿದ್ದಾರೆ.
ಬಿಲ್ ಪಾವತಿಸುವ ಬಗ್ಗೆ ಕೈಗಾರಿಕೋದ್ಯಮದ ಮುಖಂಡರು ಚರ್ಚೆ ಮಾಡಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಹುಡುಕಿದ್ದು, ಅದರಂತೆ ಬಿಲ್ ಪಾವತಿಗೆ ಅವಕಾಶ ನೀಡಲಾಗುತ್ತದೆ. ಯಾವ ರೀತಿ ಪರಿಹಾರ ಕೊಡಬಹುದು ಎಂದು ಮತ್ತೆ ಸಭೆ ಮಾಡುತ್ತೇನೆ. ಸಮಸ್ಯೆ ಪರಿಹಾರದ ಬಗ್ಗೆ ಮೇಲ್ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ನಾಳೆ ಅಥವಾ ನಾಡಿದ್ದು ಸುಧೀರ್ಘ ಚರ್ಚೆಯಾಗಿ ನಮಗೆ ನಿರ್ದೇಶನ ಬರಬಹುದು. ಫ್ಯೂಯಲ್ ಕಾಸ್ಟ್ ಅಡ್ಜಸ್ಟ್ ಮೆಂಟ್ ದರ ಅಂತರರಾಷ್ಟ್ರೀಯ ಟ್ರೆಂಡ್ಸ್ ಮೇಲೆ ಆಧಾರಿತವಾಗಿರುತ್ತದೆ. ಫ್ಯೂಯಲ್ ಕಾಸ್ಟ್ ಅಡ್ಜಸ್ಟ್ ಮೆಂಟ್ ದರ ಕಡಿಮೆ ಆಗುವ ಸಾಧ್ಯತೆ ಇದೆ. ಪರಿಹಾರ ಕಂಡುಕೊಳ್ಳಲು ಮೇಲ್ಮಟ್ಟದಲ್ಲಿ ಗಂಭೀರ ಚರ್ಚೆಗಳು ಆಗುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.