ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಕ್ರಮ ಕೈಗೊಂಡಿರುವ ಕಾಂಗ್ರೆಸ್ ಸರ್ಕಾರ ಆಸ್ತಿ ಮಾರ್ಗಸೂಚಿ ದರ ಹೆಚ್ಚಳ ಮಾಡಲು ಸಿದ್ಧತೆ ಕೈಗೊಂಡಿದೆ. ಮದ್ಯದ ದರ ಹೆಚ್ಚಳದ ಚರ್ಚೆಯೂ ನಡೆದಿತ್ತು.
ಇದರ ಜೊತೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹೊಸದಾಗಿ ರಾಜಸ್ವ ಸಂಗ್ರಹ ಗುರಿ ನಿಗದಿಪಡಿಸುವ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಮರಳು, ಜಲ್ಲಿಕಲ್ಲು, ಗ್ರಾನೈಟ್ಸ್, ಎಂ ಸ್ಯಾಂಡ್, ಕಬ್ಬಿಣದ ಅದಿರು, ಸೈಜ್ ಗಲ್ಲು, ಅಲಂಕಾರಿಕ ಶಿಲೆ ಮೊದಲಾದವುಗಳ ಬೆಲೆ ದುಬಾರಿಯಾಗುವ ಸಾಧ್ಯತೆ ಇದೆ. ಇವುಗಳ ಮೇಲೆ ರಾಜಧನ ಹೆಚ್ಚಿಸುವ ಮೂಲಕ ಇಲಾಖೆಗೆ ಹೊಸ ರಾಜಸ್ವ ಗುರಿ ನಿಗದಿಗೆ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.
ಮರಳು, ಎಂ. ಸ್ಯಾಂಡ್, ಕಲ್ಲು ರಾಯಲ್ಟಿ ಹೆಚ್ಚಳವಾದಲ್ಲಿ ಮನೆ, ಕಟ್ಟಡ ನಿರ್ಮಿಸುವ ಬಡ, ಮಧ್ಯಮ ವರ್ಗದವರಿಗೆ ಹೊರೆಯಾಗಲಿದೆ. ಖಾಸಗಿ, ಸರ್ಕಾರಿ ಕಾಮಗಾರಿ, ಮನೆ, ಕಟ್ಟಡ ನಿರ್ಮಾಣ ಕಾಮಗಾರಿಗಳ ಮೇಲೆ ದರ ಹೆಚ್ಚಳ ಪರಿಣಾಮ ಬೀರಲಿದೆ.