ಬೆಂಗಳೂರು: ವಾಹನ ನೋಂದಣಿ ಪ್ರಮಾಣ ಪತ್ರದ ನಕಲಿ ಕಾರ್ಡ್ ತಡೆಯುವ ಉದ್ದೇಶದಿಂದ ಚಿಪ್ ಆಧಾರಿತ ಆರ್.ಸಿ. ಸ್ಮಾರ್ಟ್ ಕಾರ್ಡ್ ಪದ್ಧತಿ ಮರು ಜಾರಿಗೆ ಸಾರಿಗೆ ಇಲಾಖೆ ತೀರ್ಮಾನ ಕೈಗೊಂಡಿದೆ.
ವಾಹನ ನೋಂದಣಿಯಾದ ದಿನಾಂಕ, ಚಾಸಿ ನಂಬರ್, ಇಂಜಿನ್ ನಂಬರ್, ಕಂಪನಿ, ವಾಹನದ ಬಣ್ಣ, ಮಾಡೆಲ್, ಟ್ಯಾಕ್ಸ್ ಪಾವತಿ, ವಾಹನ ತಯಾರಿಸಿದ ದಿನಾಂಕ, ಮಾಲೀಕರ ಹೆಸರು, ವಿಳಾಸ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಕಾರ್ಡ್ ಮೇಲೆ ಹಾಗೂ ಚಿಪ್ ಒಳಭಾಗದಲ್ಲಿ ಇರುತ್ತವೆ.
ರಾಜ್ಯದ ಎಲ್ಲಾ ಆರ್‌ಟಿಓ ಕಚೇರಿಗಳಲ್ಲಿ ವಿತರಿಸುವ ಆರ್.ಸಿ. ಕಾರ್ಡ್ ಗಳಿಗೆ ಈ ಮ್ಯಾನೇಜ್ಮೆಂಟ್ ಸಿಸ್ಟಮ್ ಅನ್ವಯಿಸಲು ಸೂಚಿಸಿದ್ದು, ತಕ್ಷಣದಿಂದಲೇ ಅನುಷ್ಠಾನಕ್ಕೆ ಆದೇಶ ನೀಡಲಾಗಿದೆ. ಈ ಮೊದಲು ಚಿಪ್ ಆಧಾರಿತ ಆರ್.ಸಿ. ಕಾರ್ಡ್ ಗೆ ಕರ್ನಾಟಕ ಮೋಟಾರು ವಾಹನ ಅಧಿನಿಯಮಕ್ಕೆ ತಿದ್ದುಪಡಿ ತಂದು ಹೊಸ ವಾಹನಗಳಿಗೆ ಡೀಲರ್ ಮಟ್ಟದಲ್ಲೇ ಎಲೆಕ್ಟ್ರಾನಿಕ್ ಅಥವಾ ಆನ್ಲೈನ್ ಮೂಲಕ ಆರ್‌ಸಿ ವಿತರಿಸಲು 2021ರ ಆಗಸ್ಟ್ 31 ರಂದು ಸಾರಿಗೆ ಇಲಾಖೆ ಆದೇಶಿಸಿತ್ತು.
ಸ್ಮಾರ್ಟ್ ಕಾರ್ಡ್ ಬದಲು ಪೇಪರ್ ಜೆರಾಕ್ಸ್ ನೀಡುತ್ತಿದ್ದು, ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಮತ್ತೆ ಸ್ಮಾರ್ಟ್ ಕಾರ್ಡ್ ವಿತರಣೆ ಜಾರಿಯಾಗಿತ್ತು. ಆದರೆ, ಚಿಪ್ ಆಧಾರಿತ ಕಾರ್ಡ್ ಗಳನ್ನು ಕೊಡುತ್ತಿರಲಿಲ್ಲ. ಆರ್.ಸಿ. ಕಾರ್ಡ್ ಮೇಲಿನ ವಿವರ ತಿರುಚುವುದು, ದುರ್ಬಳಕೆ ಮಾಡಿಕೊಂಡು ನಕಲಿ ಕಾರ್ಡ್ ಸೃಷ್ಟಿಯಂತಹ ವಂಚನೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರದ ಸಲಹೆ ಅನ್ವಯ ಹಳೆಯ ವ್ಯವಸ್ಥೆ ಮರು ಜಾರಿಗೆ ಕ್ರಮ ಕೈಗೊಳ್ಳಲಾಗಿದೆ.
ಚಿಪ್ ಆರ್.ಸಿ. ಕಾರ್ಡ್ ಗಳ ಮರು ಜಾರಿಗೊಳಿಸಲಾಗುವುದು. ಚಿಪ್ ನಲ್ಲಿಯೇ ವಾಹನಗಳ ವಿವರ ಇರಲಿದೆ. ನಕಲು ಮಾಡಲು ಸಾಧ್ಯವಾಗುವುದಿಲ್ಲ. ರೀಡರ್‌ನಲ್ಲಿ ಕಾರಣ ಪೂರ್ಣ ಮಾಹಿತಿ ಸಿಗುವುದರಿಂದ ಪೊಲೀಸರಿಗೂ ಅನುಕೂಲವಾಗುತ್ತದೆ. ವಂಚನೆ ತಡೆಯಬಹುದಾಗಿದೆ ಎಂದು ಹೇಳಲಾಗಿದೆ.