ಬೆಂಗಳೂರು: ದಶಕಗಳ ಹಿಂದೆ ಸರ್ಕಾರಿ ಶಾಲೆಗಳಿಗೆ ದಾನವಾಗಿ ನೀಡಿದ್ದ ಭೂಮಿಯನ್ನು ಕೆಲವರು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡು ಒತ್ತುವರಿ ಮಾಡಿದ್ದಾರೆ.
ಇಂತಹ ಪ್ರಕರಣಗಳನ್ನು ಪತ್ತೆ ಮಾಡಿ ಒತ್ತುವರಿ ತೆರವುಗೊಳಿಸಿ ಕಾನೂನಾತ್ಮಕವಾಗಿ ಶಾಲೆಗಳ ಹೆಸರಿಗೆ ಪಡೆದುಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರು ಈ ಕುರಿತು ಪತ್ರದ ಮೂಲಕ ಸ್ಪಷ್ಟ ಸೂಚನೆ ನೀಡಿದ್ದಾರೆ.
ಇಲಾಖೆಯ ಆಯುಕ್ತ ತ್ರಿಲೋಕ್ ಚಂದ್ರ, ಕಲಬುರಗಿ ಅಪರ ಆಯುಕ್ತ ಡಾ. ಆಕಾಶ್, ದಾವಣಗೆರೆ ಅಪರ ಆಯುಕ್ತೆ ಜಯಶ್ರೀ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. ಸರ್ಕಾರಿ ಶಾಲೆಗಳಿಗೆ ಅನೇಕ ದಶಕಗಳ ಹಿಂದೆ ಭೂದಾನ ವಿದ್ಯಾದಾನದಡಿ ಜಮೀನು ನೀಡಲಾಗಿದೆ. ಈ ಜಮೀನುಗಳನ್ನು ಕೆಲವರು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಂಡಿದ್ದಾರೆ.
ಅಕ್ರಮವಾಗಿ ಶಾಲೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ಇವರಿಂದ ಶಾಲಾ ಸುಪರ್ದಿಗೆ ಪಡೆದುಕೊಳ್ಳಬೇಕಿದೆ. ಇದಕ್ಕೆ ಕಾನೂನು ಹೋರಾಟ ನಡೆಸಲು ಶಿಕ್ಷಣ ಇಲಾಖೆ ಮುಂದಾಗಬೇಕು. ಶಾಲೆಗಳ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಆ ಜಾಗವನ್ನು ಶಾಲೆ ಹೆಸರಿಗೆ ಖಾತೆ ಮಾಡಿಸುವಂತೆ ಕಾನೂನುಬಾಹಿರವಾಗಿ ಮಾಡಿಕೊಂಡ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಸಂಬಂಧಿಸಿದ ಪ್ರಾಧಿಕಾರದಿಂದ ಜಾಗದ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಿ ಜಿಲ್ಲಾಧಿಕಾರಿಗಳಿಂದ ನಿಯಮಗಳನುಸಾರ ಜಾಗವನ್ನು ಶಾಲೆಗಳ ಹೆಸರಿಗೆ ಖಾತೆ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
