ಚಿಕ್ಕಮಗಳೂರು: ರಾಜ್ಯದಲ್ಲಿ ಕುಸುಮ್ –ಎ(ಪ್ರಧಾನಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಮ್ ಉತ್ಥಾನ ಮಹಾಭಿಯಾನ) ಜಾರಿಗೆ ಉದ್ದೇಶಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರಿನ ಟಿಎಪಿಸಿಎಂಎಸ್ ನ ಅಮೃತ ಮಹೋತ್ಸವ ಮತ್ತು ರೈತ ಬಜಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರೇ ವಿದ್ಯುತ್ ಉತ್ಪಾದಿಸಿ ಬಳಸಲು ಉತ್ತೇಜನ ನೀಡುವ ಕುಸುಮ್ -ಎ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಕುಸುಮ್ –ಬಿ(ರೈತರಿಗೆ ಸೋಲಾರ್ ಕೃಷಿ ಪಂಪ್ಸೆಟ್) ಮತ್ತು ಕುಸುಮ್ –ಸಿ(ಕೃಷಿ ಫೀಡರ್ ಗಳ ಸವೀಕರಣ ಯೋಜನೆ ಅನುಷ್ಠಾನದಲ್ಲಿದೆ. ಇದರೊಂದಿಗೆ ಕುಸುಮ್ -ಎ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
ಕುಸುಮ್ -ಎ ಯೋಜನೆಯಡಿ ರೈತರು, ರೈತರ ಗುಂಪುಗಳು, ಸಹಕಾರಿ ಸಂಸ್ಥೆಗಳು, ಪಂಚಾಯಿತಿಗಳು, ರೈತ ಉತ್ಪಾದಕರ ಸಂಸ್ಥೆಗಳು, ನೀರು ಬಳಕೆದಾರರ ಸಂಘಗಳು, ವಿದ್ಯುತ್ ಉಪ ಕೇಂದ್ರಗಳಿಂದ ಐದು ಕಿಲೋ ಮೀಟರ್ ವ್ಯಾಪ್ತಿಯ ಒಳಗೆ 500 ಕಿಲೋವ್ಯಾಟ್ ನಿಂದ ಗರಿಷ್ಠ 2 ಮೆಗಾ ವ್ಯಾಟ್ ವರೆಗೆ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಬಹುದಾಗಿದೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಅವರೇ ಬಳಸಿಕೊಳ್ಳಬಹುದು. ಹೆಚ್ಚುವರಿ ವಿದ್ಯುತ್ ಅನ್ನು ಸರ್ಕಾರ ಖರೀದಿಸುತ್ತದೆ. ಇದರಿಂದ ವಿದ್ಯುತ್ ಸಮಸ್ಯೆಗೂ ಪರಿಹಾರ ಸಿಗಲಿದೆ. ಮಾತ್ರವಲ್ಲ, ರೈತರಿಗೂ ಆದಾಯ ಬರುತ್ತದೆ ಎಂದು ಹೇಳಿದ್ದಾರೆ.