ಬೆಂಗಳೂರು: ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿಗೆ ಶನಿವಾರದಿಂದ ಮುಖ್ಯ ಪರೀಕ್ಷೆಗಳು ನಡೆಯಲಿವೆ. ಸುಮಾರು 6000 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಂಗಳೂರು ಮತ್ತು ಧಾರವಾಡದಲ್ಲಿ ಪರೀಕ್ಷಾ ಕೇಂದ್ರಗಳನ್ನು ನೀಡಲಾಗಿದೆ.
ಶನಿವಾರ ಬೆಳಗ್ಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಅರ್ಹತಾದಾಯಕ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ವಸ್ತುಗಳು ಸೇರಿದಂತೆ ಯಾವುದೇ ರೀತಿಯ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಪಡೆದ 185 ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್ ವಿತರಿಸಲಾಗಿದೆ. ಶುಕ್ರವಾರ ಸಂಜೆ ಮಳೆಯಲ್ಲಿ ಹಾಲ್ ಟಿಕೆಟ್ ಪಡೆದುಕೊಳ್ಳಲು ಬಂದಿದ್ದ ವಿದ್ಯಾರ್ಥಿಗಳು ಪರದಾಟ ನಡೆಸಿದ್ದಾರೆ. ಮೇ 2ರ ಮಧ್ಯಾಹ್ನ 3 ಗಂಟೆಯವರೆಗೆ ಕಚೇರಿಗೆ ಬಂದು ಅರ್ಜಿ ಸಲ್ಲಿಸಲು ಕೆಪಿಎಸ್ಸಿ ಕೋರ್ಟ್ನಿಂದ ಅನುಮತಿ ಪಡೆದ 185 ಅಭ್ಯರ್ಥಿಗಳಿಗೆ ಅವಕಾಶ ನೀಡಿತ್ತು. ನಂತರ ರಾತ್ರಿ 12 ಗಂಟೆಯವರೆಗೆ ಹಾಲ್ ಟಿಕೆಟ್ ವಿತರಿಸುವುದಾಗಿ ಹೇಳಿದ್ದು, ಅನೇಕ ವಿದ್ಯಾರ್ಥಿಗಳು ಕೆಪಿಎಸ್ಸಿ ಕಚೇರಿಗೆ ತೆರಳಿ ಹಾಲ್ ಟಿಕೆಟ್ ಪಡೆದುಕೊಂಡಿದ್ದಾರೆ. 119 ವಿದ್ಯಾರ್ಥಿಗಳಿಗೆ ಶುಕ್ರವಾರ ಕೋರ್ಟ್ ಅನುಮತಿ ದೊರೆತ ಕಾರಣ ಹಾಲ್ ಟಿಕೆಟ್ ಪಡೆದುಕೊಳ್ಳಲು ಬಂದಿದ್ದರು. ತಡರಾತ್ರಿವರೆಗೂ ಹಾಲ್ ಟಿಕೆಟ್ ಪಡೆಯಲು ಕಾದಿದ್ದರು.
ಪರೀಕ್ಷೆಯನ್ನು ಮುಂದೂಡುವಂತೆ ಕೆಪಿಎಸ್ಸಿ ಅಧ್ಯಕ್ಷರಿಗೆ ಮನವಿ ಮಾಡಿದರೂ ಮುಂದೂಡದೇ ಪರೀಕ್ಷೆ ನಡೆಸಲಾಗುತ್ತಿದೆ. ಕೆಪಿಎಸ್‌ಸಿ ಬೇಜವಾಬ್ದಾರಿಯಿಂದ ಪರೀಕ್ಷೆಯ ಹಿಂದಿನ ದಿನ ತಡರಾತ್ರಿಯವರೆಗೂ ಹಾಲ್ ಟಿಕೆಟ್ ಪಡೆದುಕೊಳ್ಳುವಂತಾಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.