ಕೊಪ್ಪಳ: ರಾಜ್ಯದಲ್ಲಿ ಕೆಲ ದಿನಗಳಿಂದ ಕನ್ನಡಿಗರ ಮೇಲಿನ ಹಲ್ಲೆ ಪ್ರಕರಣ ಹೆಚ್ಚುತ್ತಿದೆ. ಬೆಳಗಾವಿಯಲ್ಲಿ ಕನ್ನಡ ಮಾತನಾಡಿ ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದರು. ಈ ಘಟನೆ ಬೆನ್ನಲ್ಲೇ ಇತ್ತೀಚೆಗೆ ಬೆಂಗಳೂರಿನಿಲ್ಲಿ ವಿಂಗ್ ಕಮಾಂಡರ್ ಓರ್ವ ಕನ್ನಡಿಗ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ನಡೆದಿತ್ತು. ಇದೀಗ ಇಂತಹ್ಹೇ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕನ್ನಡ ಮಾತನಾಡಿ ಎಂದಿದ್ದಕ್ಕೆ ಟಿಕೆಟ್ ಕಲೆಕ್ಟರ್ ಓರ್ವ ಪ್ರಯಾಣಿಕನ ಮೇಲೆ ದಬ್ಬಾಳಿಕೆ ನಡೆಸಿ ಹಲ್ಲೆ ನಡೆಸಿದ್ದಾನೆ. ಹಂಪಿ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.
ಮೈಸೂರಿನಿಂದ ಕೊಪ್ಪಳಕ್ಕೆ ಪ್ರಯಾಣಿಕ ತೆರಳುತ್ತಿದ್ದ. ಈ ವೇಳೆ ಯಲಹಂಕ ಸಮೀಪ ರೈಲು ಬರುತ್ತಿದ್ದಂತೆ ಟಿಕೆಟ್ ತಪಾಸಣೆಗೆ ಟಿಕೆಟ್ ಕಲೆಕ್ಟರ್ ಬಂದಿದ್ದಾರೆ. ರೈಲಿನಲ್ಲಿದ್ದ ಕೊಪ್ಪಳ ಮೂಲದ ಪ್ರಯಾಣಿಕ ಮೊಹಮ್ಮದ್ ಭಾಷಾ ಟಿಕೆಟ್ ಕಲೆಕ್ಟರ್ ಗೆ ಕನ್ನಡದಲ್ಲಿ ಮಾತನಾಡುವಂತೆ ಹೇಳಿದ್ದಾರೆ. ಕೋಪಗೊಂಡ ಟಿಕೆಟ್ ಕಲೆಕ್ಟರ್ ಮೊಹಮ್ಮದ್ ಭಾಷಾ ಕೈಲಿದ್ದ ಮೊಬೈಲ್ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ.
ಘಟನೆ ಖಂಡಿಸಿ ಇಂದು ಕೊಪ್ಪಳದಲ್ಲಿ ಟಿಕೆಟ್ ಕಲೆಕ್ಟರ್ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಕನ್ನಡ ನೆಲದಲ್ಲಿದ್ದುಕೊಂಡು ಕನ್ನಡಿಗರ ಮೇಲೆಯೇ ಹಲ್ಲೆ ನಡೆಸುತ್ತಿರುವ ಪ್ರಕರಣ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಯಿತು.