ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಸಮೀಪ ಜಂಗ್ಲಿಗೆ ತೆರಳುವ ರಸ್ತೆಯಲ್ಲಿ ಗುರುವಾರ ರಾತ್ರಿ ತುಂಗಭದ್ರಾ ಎಡ ದಂಡೆ ಕಾಲುವೆ ಬಳಿ ಕುಳಿತಿದ್ದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ರೇಲ್ ನ 27 ವರ್ಷದ ಪ್ರವಾಸಿ ಮಹಿಳೆ ಮತ್ತು 29 ವರ್ಷದ ಸ್ಥಳೀಯ ಹೋಂ ಸ್ಟೇ ಒಡತಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ದೂರು ನೀಡಲಾಗಿದೆ. ಇನ್ನುಳಿದ ಮೂವರು ಪ್ರವಾಸಿಗರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಒಡಿಶಾದ ಪ್ರವಾಸಿಗನನ್ನು ಕಾಲುವೆಗೆ ಎಸೆಯಲಾಗಿದೆ.
ಅಮೆರಿಕ, ಇಸ್ರೇಲ್, ಮಹಾರಾಷ್ಟ್ರ ಮತ್ತು ಒಡಿಶಾದಿಂದ ಬಂದಿದ್ದ ನಾಲ್ವರು ಪ್ರವಾಸಿಗರು ಹಾಗೂ ಸ್ಥಳೀಯ ಹೋಸ್ಟೇ ಒಡತಿ ರಾತ್ರಿ ಸಂಗೀತ, ಕೆರೆಯ ಸೌಂದರ್ಯ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಹಣ ಕೊಡಲು ನಿರಾಕರಿಸಿದಾಗ ಜಗಳವಾಡಿ ಹಲ್ಲೆ ನಡೆಸಿದ್ದಾರೆ. ಇಬ್ಬರ ಮೇಲೆ ಅತ್ಯಾಚಾರ ಎಸಗಿದ್ದು, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ಬಳಿಕ ಕ್ರಮ ಜರುಗಿಸಲಾಗುವುದು. ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ ಯತ್ನ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ.