ಬೆಳಗಾವಿ: ಪ್ರತಿ ವರ್ಷದಂತೆ ಈ ಬಾರಿಯೂ ಕಿತ್ತೂರು ವಿಜಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಈ ಬಾರಿ ಕಿತ್ತೂರು ಉತ್ಸವವನ್ನು ಮಾದರಿ ರೀತಿಯಲ್ಲಿ ಆಚರಿಸುವ ಯೋಜನೆಯಿದ್ದು, ಜನರು ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಕರೆ ನೀಡಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಿತ್ತೂರಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ (ಅ.06) ನಡೆದ ಕಿತ್ತೂರು ಉತ್ಸವ- 2025ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ಸವದಲ್ಲಿ ಸ್ಥಳೀಯರಿಗೆ ಅವಕಾಶ ಕಲ್ಪಿಸಿ, ಕಿತ್ತೂರಿನ ಸ್ಮಾರಕಗಳ ಸುಧಾರಣೆಗೊಳಿಸಿ, ದೀಪಾಲಂಕಾರ, ಸೇತುವೆ ಸ್ವಚ್ಛತೆ, ಬಸ್ ನಿಲ್ದಾಣದ ದುರಸ್ಥಿ ಕಾಮಗಾರಿ ಕೈಗೊಳ್ಳಲಾಗುವುದು. ಹೊಸ ಸಾಹಿತಿಗಳು, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶದಿಂದ ಕಾರ್ಯಕ್ರಮದಲ್ಲಿ ಬದಲಾವಣೆಗೆ ತಿಳಿಸಲಾಗಿದ್ದು, ಕಿತ್ತೂರು ಉತ್ಸವ ಮಾದರಿ ಉತ್ಸವವನ್ನಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದರು.
ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಇತಿಹಾಸವನ್ನು ಹೊರ ತರುವ ನಿಟ್ಟಿನಲ್ಲಿ ಕಿತ್ತೂರು ಇತಿಹಾಸದ ಪುಸ್ತಕ, ಕೈಪಿಡಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಕಳೆದ ಬಾರಿ ಕಲಾವಿದರಿಗೆ ಹೆಚ್ಚು ಅವಕಾಶ ಸಿಗದ ಕಾರಣ ಈ ವರ್ಷದ ಉತ್ಸವದಲ್ಲಿ ಹೆಚ್ಚಿನ ಕಲಾವಿದರು ಭಾಗವಹಿಸಲು ಆಹ್ವಾನಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗುವುದು. ಕಿತ್ತೂರಿಗೆ ಹೊಸ ಬಸ್ ಗಳು ಶೀಘ್ರದಲ್ಲೇ ಬರಲಿದ್ದು, ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಕಳೆದ ವರ್ಷ ಸಾರ್ವಜನಿಕರ ಸಲಹೆ ಪಡೆದು ಅವರ ಅನಿಸಿಕೆಯಂತೆ ಸಮಿತಿಗಳನ್ನು ರಚಿಸಿ ಉತ್ಸವಕ್ಕೆ ತಯಾರಿ ಮಾಡಿಕೊಳ್ಳಲಾಗಿತ್ತು. ಸರಿಸುಮಾರು 4 ಲಕ್ಷ ಜನರು ಕಳೆದ ವರ್ಷ ಉತ್ಸವದಲ್ಲಿ ಪಾಲ್ಗೊಂಡು ಕಿತ್ತೂರು ಉತ್ಸವ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು ಎಂದರು.
ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ತ ಮಹಾಸ್ವಾಮಿಗಳು ಮಾತನಾಡಿ, ರಾಜ್ಯ ಸರ್ಕಾರ ಈ ಬಾರಿಯ ಕಿತ್ತೂರು ಉತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಲು ಕಾಳಜಿವಹಿಸಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಸಾರ್ವಜನಿರು ಕೂಡ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಪ್ರತಿ ವರ್ಷ ಜಿಲ್ಲಾಡಳಿತದಿಂದ ಕಿತ್ತೂರು ಉತ್ಸವ ಅದ್ದೂರಿಯಾಗಿ ನಡೆಯಲಿದ್ದು, ಅದಕ್ಕೆ ಅವಶ್ಯವಿರುವ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತದೆ. ಕಳೆದ ವರ್ಷ ಕಿತ್ತೂರು ಉತ್ಸವಕ್ಕೆ 5 ಕೋಟಿ ಅನುದಾನ ನೀಡಲಾಗಿತ್ತು ಅದೇ ರೀತಿಯಲ್ಲಿ 2025 ರಲ್ಲಿ ಕಿತ್ತೂರು ಉತ್ಸವಕ್ಕೆ 5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಪ್ರಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು 2025 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ “ನಮ್ಮ ಚಿತ್ತ ಶತಕದತ್ತ” ಅಂತ ಎಂಬ ಕೈಪಿಡಿ ಬಿಡುಗಡೆ ಗೊಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರವೀಣ ಜೈನ್, ಕಿತ್ತೂರು ತಹಶೀಲ್ದಾರ್ ಕಲಗೌಡ ಪಾಟೀಲ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆ.ಹೆಚ್ ಚನ್ನೂರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.