ಬೆಂಗಳೂರು: ಭಾರತ-ಪಾಕಿಸ್ತಾನ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಯವರು ತಮಗೆ ಈ ಹಿಂದೆ ಬರೆದಿದ್ದ ಪತ್ರದ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ನನ್ನ ತಾಯಿ ಸರೋಜಾ ಸಂಜೀವ್ ನಿಧನರಾದಾಗ ನೀವು ಬರೆದ ಪತ್ರ ವೈಯಕ್ತಿಕ ನಷ್ಟದ ಆ ಕಠಿಣ ಸಮಯದಲ್ಲಿ ನನಗೆ ಶಕ್ತಿ, ಧೈರ್ಯವನ್ನು ತುಂಬಿತ್ತು. ಅದು ನನಗೆ ಜೀವನಪರ್ಯಂತ ನೆನಪಿರಲಿದೆ. ಇಂದು ನಾನು ಈ ಪತ್ರವನ್ನು ಕೇವಲ ಒಬ್ಬ ಮಗನಾಗಿ ಬರೆಯುತ್ತಿಲ್ಲ. ಬದಲಿಗೆ ದೇಶದ ನಾಗರಿಕನಾಗಿ ಬರೆಯುತ್ತಿದ್ದೇನೆ. ಆಪರೇಷನ್ ಸಿಂಧೂರ್ ವಿಜಯೋತ್ಸವಕ್ಕೆ ರಾಷ್ಟ್ರವೇ ನಮಿಸಿದೆ. ನಾನು ಅಭಿಮಾನದಿಂದ ಬರೆಯುತ್ತಿದ್ದೇನೆ. ಆಪರೇಶನ್ ಸಿಂಧೂರ್ ಕೇವಲ ಪ್ರತಿಕ್ರಿಯೆಯಾಗಿರಲಿಲ್ಲ. ಅದೊಂದು ಹೇಳಿಕೆಯಾಗಿತ್ತು. ಭಾರತ ಅಲುಗಾಡುವುದಿಲ್ಲ, ಭಾರತವು ಮರೆಯುವುದೂ ಇಲ್ಲ ಮತ್ತು ಭಾರತವು ಯಾವಾಗಲೂ ಉದಯಿಸುತ್ತದೆ ಎಂಬ ದಿಟ್ಟ, ನಿರ್ಣಾಯಕ ಸಂದೇಶವನ್ನು ಜಗತ್ತಿಗೆ ನೀಡಿದೆ ಎಂದಿದ್ದಾರೆ.
ನಿಮ್ಮಲ್ಲಿ ನಾವು ಕೇವಲ ಪದಗಳಿಂದ ಮಾರ್ಗದರ್ಶನ ಮಾಡದ ನಾಯಕನನ್ನು ನೋಡುತ್ತೇವೆ. ದೃಢವಿಶ್ವಾಸದಿಂದ, ಈ ಕಾರ್ಯಾಚಾರಣೆಯನ್ನು ನಡೆಸಿದ ಸ್ಪಷ್ಟತೆ ಮತ್ತು ಆತ್ಮವಿಶ್ವಾಸವು ನಮ್ಮ ನಾಗರಿಕತೆಯ ಆತ್ಮವನ್ನು ಪ್ರತಿಬಿಂಬಿಸುತ್ತದೆ. ಅದು ಯಾವಾಗಲೂ ನಿರ್ಭೀತ, ಧಾರ್ಮಿಕ ಮತ್ತು ಧೃಢನಿಶ್ಚಯವನ್ನು ಹೊಂದಿದೆ. ಪ್ರತಿಯೊಬ್ಬ ಕನ್ನಡಿಗ ಮತ್ತು ಇಡೀ ಕನ್ನಡ ಚಿತ್ರರಂಗ ನಿಮ್ಮೊಂದಿಗೆ ಗಟ್ಟಿಯಾಗಿ ನಿಂತಿದೆ. ನಿಮ್ಮ ಧೈರ್ಯದಿಂದ ನಾವು ಸ್ಫೂರ್ತಿ ಪಡೆಯುತ್ತೇವೆ ಎಂದಿದ್ದಾರೆ.
ನಿಮ್ಮ ನಾಯಕತ್ವದಲ್ಲಿ ನಮ್ಮ ರಕ್ಷಣಾ ಪಡೆಗಳು ಸಾಟಿಯಿಲ್ಲದ ನಿಖರತೆ, ಶಿಸ್ತು ಮತ್ತು ಶೌರ್ಯವನ್ನು ಪ್ರದರ್ಶಿಸಿವೆ. ಅವರ ಯಶಸ್ಸು ನಮ್ಮ ಹೆಮ್ಮೆ ನಾವು ಒಗ್ಗಟ್ಟಿನಲ್ಲಿದ್ದೇನೆ. ಒಂದು ಧ್ವನಿ, ಒಂದು ರಾಷ್ಟ್ರವಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ. ಜೈ ಹಿಂದ್, ಜೈ ಕರ್ನಾಟಕ ಎಂದು ಸುದೀರ್ಘ ಪತ್ರ ಬರೆದಿದ್ದಾರೆ.