ತಿರುವನಂತಪುರಂ: ಇಬ್ಬರು ವ್ಯಕ್ತಿಗಳಲ್ಲಿ ಶಂಕಿತ ನಿಫಾ ವೈರಸ್ ಲಕ್ಷಣಗಳು ಪತ್ತೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದಲ್ಲಿ ಮತ್ತೆ ನಿಫಾ ವೈರಸ್ ಹರಡಿರುವ ಆತಂಕ ಎದುರಾಗಿದೆ.
ಇಬ್ಬರು ವ್ಯಕ್ತಿಗಳಲ್ಲಿ ನಿಫಾ ವೈರಸ್ ಸೋಂಕು ಶಂಕೆ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಕೋಯಿಕ್ಕೋಡ್, ಮಲಪ್ಪುರಂ, ಪಾಲಕ್ಕಾಡ್ ಜಿಲ್ಲೆಗಳಲ್ಲಿ ನಿಫಾ ವೈರಸ್ ಬಗ್ಗೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.
ಕೋಯಿಕ್ಕೋಡ್ ಹಾಗೂ ಮಲಪ್ಪುರಂನ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಪಾಸಣೆ ವೇಳೆ ಮಲಪ್ಪುರಂ ಹಾಗೂ ಪಾಲಕ್ಕಾಡ್ ನಿಂದ ಬಂದಿದ್ದ ಇಬ್ಬರು ವ್ಯಕ್ತಿಗಳಲ್ಲಿ ಶಂಕಿತ ನಿಫಾ ವೈರಸ್ ಲಕ್ಷಣಗಳು ಪತ್ತೆಯಾಗಿವೆ. ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಆದರೆ ಈಗಗಲೇ ನಿಫಾ ಪ್ರೋಟೋಕಾಲ್ ಗೆ ಅನುಗುಣವಾಗಿ ಕ್ರಮಗಳನ್ನು ಬಲಪಡಿಸಿದ್ದೇವೆ ಎಂದು ತುರ್ತು ಸಭೆ ನಡೆಸಿದ ಬಳಿಕ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.