ಮಂಡ್ಯ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಮದ್ದೂರಿನಲ್ಲಿ ಕಲ್ಲು ತೂರಾಟ ನಡೆಸಿರುವುದನ್ನು ಖಂಡಿಸಿ ಮಂಡ್ಯ ಜಿಲ್ಲೆ ಮದ್ದೂರು ಬಂದ್ ಗೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಕರೆ ನೀಡಿದ್ದಾರೆ. ಒಂದೆಡೆ ಮದ್ದೂರು ಸಂಪೂರ್ಣ ಬಂದ್ ಆಗಿದೆ. ಮತ್ತೊಂದೆಡೆ ಮಂಡ್ಯದ ಕೆರಗೋಡು ಗ್ರಾಮದಲ್ಲಿಯೂ ಪ್ರತಿಭಟನೆ ತೀವ್ರಗೊಂಡಿದೆ.
ಹನುಮಧ್ವಜ ಸಮಿತಿ ಕಾರ್ಯಕರ್ತರು ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟ ಘಟನೆ ಖಂಡಿಸಿ ಕೆರಗೋಡಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೆರಗೋಡು ಗ್ರಾಮದಾದ್ಯಂತ ಪ್ರತಿಭಟನಾ ಮೆರವಣಿಗೆ ನಡೆಸಿರುವ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿ, ಶಾಂತಿಗೆ ಭಂಗ ತಂದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಇನ್ನೆಂದೂ ಇಂತಹ ಘಟನೆ ಮರುಕಳಿಸದಂತೆ ಪಾಠಕಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.