ಕಾಶ್ಮೀರಿ ಪಂಡಿತರು-ಮುಸ್ಲೀಂ ಬಾಂಧವರ ಸೌಹಾರ್ಧತೆಗೆ ಸಾಕ್ಷಿಯಾದ ಮೇಳ ಖೀರ್ ಭವಾನಿ ಉತ್ಸವ

ಶ್ರೀನಗರ: ಜಮ್ಮು-ಕಾಶ್ಮೀರದ ತುಲ್ಮುಲ್ಲಾ ದೇವಸ್ಥಾನದಲ್ಲಿ ಹಿಂದೂ-ಮುಸ್ಲೀಂ ಸಮುದಾಯಗಳು ಒಗ್ಗಟ್ಟಾಗಿ ಮೇಳ ಖೀರ್ ಭವಾನಿ ಉತ್ಸವವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಕಾಶ್ಮೀರದ ಗಂಡೇರ್ಬಾಲ್ ಜಿಲ್ಲೆಯ ತುಲ್ಮುಲ್ಲಾ ದೇವಸ್ಥಾನದಲ್ಲಿ ಕಾಶ್ಮೀರಿ ಪಂಡಿತರ ಕುಲದೇವರು ಎಂದೇ ಪ್ರಸಿದ್ಧವಾಗಿರುವ ಮಾತಾ ರಗ್ನ್ಯಾ ದೇವಿಯ ವಾರ್ಷಿಕ ಪೂಜಾ ಕಾರ್ಯಕ್ರಮ ಇದಾಗಿದ್ದು, ದೇಶ ವಿದೇಶಗಳಿಂದಲೂ ಆಗಮಿಸಿದ ಕಾಶ್ಮೀರಿ ಪಂಡಿತರು, ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ವಿಶೇಷ ಪೂಜೆ ನೆರವಿಸಿ ಶಾಂತಿ-ಸಮೃದ್ಧಿಗಾಗಿ ಪ್ರಾರ್ಥಿಸಿದರು.

ರಗ್ನ್ಯಾ ದೇವಾಲಯದಲ್ಲಿ ನಡೆಯುವ ಮಾತಾ ಖೀರ್ ಭವಾನಿ ಮೇಳ ಐತಿಹಾಸಿಕ ವಾರ್ಷಿಕ ಉತ್ಸವವಾಗಿದೆ. ಈ ದೇವಾಲಯ ಕಾಶ್ಮೀರಿ ಪಂಡಿತರು ಹಾಗೂ ಮುಸ್ಲಿಂರ ನ್ಡುವೆ ಸೌಹಾರ್ದತೆ, ಸಹೋದರತ್ವ ಪ್ರೀತಿ-ವಿಶ್ವಾಸಕ್ಕೆ ಜೀವಂತ ಉದಾಹರಣೆಯಾಗಿದೆ. ದೇವಾಲಯದ ಮುಖ್ಯದ್ವಾರದ ಬಳಿ ಸ್ಥಳೀಯ ಮುಸ್ಲಿಂರು ಭಕ್ತರಿಗೆ ಪ್ರಸಾದವನ್ನು ಸಿದ್ಧಪಡಿಸಿಕೊಡುತ್ತಾರೆ. ಅದನ್ನು ಭಕ್ತರು ದೇವಾಲಯದೊಳಗೆ ತೆಗೆದುಕೊಂಡು ಹೋಗಿ ಮಾತಾ ರಗ್ನ್ಯಾದೇವಿಗೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.

ದೇವಾಲಯದ ಬಳಿಯ ಅಂಗಡಿ ಮಾಲೀಕರೊಬ್ಬರಾದ ಮೊಹಮ್ಮದ್ ಅಸ್ಲಂ ಎಂಬುವವರು ಹೆಳುವ ಪ್ರಕಾರ, ನಾವು ಇಡೀ ವರ್ಷ ಈ ಹಬ್ಬಕ್ಕಾಗಿ ಕಾಯುತ್ತೇವೆ. ನಮ್ಮ ಪಂಡಿತ ಸಹೋದರರು ದೇವಾಲಯದ ಉತ್ಸವಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಅವರಿಗೆ ಅಗತ್ಯವಿರುವ ಪ್ರಸಾದ, ಪೂಜೆಗೆ ಬೇಕಾದ ಸಾಮಗ್ರಿಗಳನ್ನು ನಾವು ಒದಗಿಸಿಕೊಡುತ್ತೇವೆ. ಕಾಶ್ಮೀರಿ ಪಂಡಿತರು-ಮುಸ್ಲಿಂರು ಸೇರಿ ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಶ್ರದ್ಧೆಯಿಂದ ಪಾಲ್ಗೊಂಡು ಆಚರಿಸುತ್ತೇವೆ.

ಕಾಶ್ಮೀರಿ ಪಂಡಿತರು ಇಲ್ಲಿನ ದೇವರನ್ನು ಕುಲದೇವರು ಎಂದು ಪೂಜಿಸುತ್ತಾರೆ. ಅವರ ನಂಬಿಕೆ, ಆಚರಣೆಯಲ್ಲಿ ನಾವೂ ಪಾಲ್ಗೊಳ್ಳುತ್ತೇವೆ. ಮಾತಾ ರಗ್ನ್ಯಾ ದೇವಿ ದೇವಾಲಯಕ್ಕೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುತಾರೆ. ಚಿನಾರ್ ಮರಗಳಿಂದ ಈ ದೇವಾಲಯ ಆವೃತವಾಗಿದ್ದು, ಮೂರು ದಿನಗಳ ಕಾಲ ಹಬ್ಬದ ವಾತಾವರಣ ಕಣ್ಮನ ಸೆಳೆಯುವಂತಿರುತ್ತದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read