ಕೊಪ್ಪಳ: ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1 ಆಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಭ್ರಷ್ಟಾಚಾರ ಮಿತಿಮೀರಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಆರೋಪಿಸಿದ್ದಾರೆ.
ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತಾಧಿಕಾರ ಸಮಿತಿ ಜಿಲ್ಲಾಮಟ್ಟದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಕಾಮಗಾರಿಗಳು ಗುಣಮಟ್ಟದಿಂದ ನಡೆಯುತ್ತಿಲ್ಲ. ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಮಗಾರಿಗಳು ತೀರಾ ಕಳಪೆಯಾಗುತ್ತಿವೆ. ಕಟ್ಟಡ ರಸ್ತೆಗಳು ಬೇಗನೆ ಹಾಳಾಗುತ್ತಿವೆ. ಈ ವರ್ಷ ನಿರ್ಮಿಸಿದ ರಸ್ತೆ ಮುಂದಿನ ವರ್ಷಕ್ಕೆ ದುರಸ್ತಿ ಮಾಡುವ ಪರಿಸ್ಥಿತಿ ಇದೆ. ಇದು ದುರಂತ ಎಂದು ಹೇಳಿದ್ದಾರೆ.
ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಾಯಕರಾದ ನಾವೇ ಮೊದಲು ಸರಿಯಾಗಿಲ್ಲ ಎಂದರೆ ಅಧಿಕಾರಿಗಳು ಸರಿಯಾಗಿರಲು ಹೇಗೆ ಸಾಧ್ಯ? ಮೊದಲು ನಾವು ಸುಧಾರಿಸಬೇಕು. ಆಗ ಅಧಿಕಾರಿಗಳು ನಮ್ಮ ಮಾತು ಕೇಳುತ್ತಾರೆ. ಅರಣ್ಯ ಇಲಾಖೆಯವರು ಪ್ರತಿ ವರ್ಷ ಲಕ್ಷಾಂತರ ಗಿಡಗಳನ್ನು ನೆಡುತ್ತಾರೆ. ಸ್ಥಳಕ್ಕೆ ಹೋಗಿ ನೋಡಿದಾಗ ಒಂದೂ ಗಿಡಗಳು ಇರುವುದಿಲ್ಲ. ಬಹುತೇಕ ಇಲಾಖೆಗಳು ಹೀಗೇ ಇವೆ ಎಂದು ಹೇಳಿದ್ದಾರೆ.