ಕಾರವಾರ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಮಳೆಯ ಅಬ್ಬರ ಜೋರಾಗಿದ್ದು, ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಾಷ್ಟ್ರೀಯ ಹೆದ್ದಾರಿಯೇ ಕೊಚ್ಚಿ ಹೋಗಿದೆ. ದೇವಿಮನೆ ಘಟ್ಟದಲ್ಲಿ ಹೆದ್ದಾರಿ ವರುಣಾರ್ಭಟಕ್ಕೆ ಕೊಚ್ಚಿ ಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕಳೆದ ಒಂದು ವರ್ಷದಿಂದ 766ಇ ಹೆದ್ದಾರಿ ಕಾಮಗಾರಿ ನಡೆಯುತ್ತಿತ್ತು. ಇದೀಗ ಭಾರಿ ಮಳೆಯಿಂದಾಗಿ ಹೆದ್ದಾರಿ ಕೊಚ್ಚಿಕೊಂಡು ಹೋಗಿದೆ. ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ರಸ್ತೆಯೂ ಬೆಣ್ಣೆ ಹೊಳೆ ಹಳ್ಳದ ನೀರಿನಿಂದಾಗಿ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ಕುಮಟಾ-ಶಿರಸಿ ಸಂಪರ್ಕ ಕಡಿತಗೊಂಡಿದೆ.
ಒಂದೆಡೆ ಹೆದ್ದಾರಿ ನೀರಿನ ರಭಸಕ್ಕೆ ಕೊಚ್ಚ್ಜಿ ಹೋಗಿದ್ದು, ಮತ್ತೊಂದೆಡೆ ತಾತ್ಕಾಲಿಕ ರಸ್ತೆಯೂ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಈ ಮಾರ್ಗದ ರಸ್ತೆ ಸಂಚಾರ ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ.