ಬೆಂಗಳೂರು: ಗ್ರಾಮೀಣ ಜನರ ಜೀವನ ಸುಗಮಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಯಾಣಪಥ ಯೋಜನೆಯಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಮೊತ್ತದಲ್ಲಿ 286 ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಘೋಷಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ 38 ವಿಧಾನಸಭಾ ಕ್ಷೇತ್ರದಲ್ಲಿ ಕಲ್ಯಾಣ ಪಥ ಯೋಜನೆ ಜಾರಿಗೊಳಿಸಲಾಗುವುದು. ರಾಜ್ಯದ್ಯಂತ ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಜಾಲ ಬಲಪಡಿಸಲು 5200 ಕೋಟಿ ರೂಪಾಯಿ ಮೊತ್ತದ ಪ್ರಗತಿಪಥ ಯೋಜನೆಯನ್ನು ಪ್ರಕಟಿಸಲಾಗಿದೆ.
ಇಂದು ಬೆಳಗ್ಗೆ 11:30ಕ್ಕೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಮೀಪ ಕಟ್ಟಿಸಂಗಾಮಿಯಲ್ಲಿ ಕಲ್ಯಾಣ ಪಥ ಯೋಜನೆಯ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಲಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 1166 ಕಿಲೋಮೀಟರ್ ರಸ್ತೆ ಅಭಿವೃದ್ಧಿಪಡಿಸಲು ಚಾಲನೆ ನೀಡಲಾಗುವುದು. ಕೊಪ್ಪಳ, ಬಳ್ಳಾರಿ, ಬೀದರ್, ಕಲಬುರಗಿ, ರಾಯಚೂರು, ವಿಜಯನಗರ, ಯಾದಗಿರಿ ಜಿಲ್ಲೆಗಳ 1166 ಕಿಲೋಮೀಟರ್ ರಸ್ತೆ ಅಭಿವೃದ್ಧಿಪಡಿಸಲಾಗುವುದು.