ಕಲಬುರಗಿ: ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ಸಂಭವಿಸಿದ್ದು, ಐಸಿಯುನಲ್ಲಿದ್ದ ರೋಗಿಯ ಗ್ಲುಕೋಸ್ ಪೈಪ್ ಕಳಚಿ ತೀವ್ರ ರಕ್ತಸ್ರಾವದಿಂದ ಗಂಭೀರ ಸ್ಥಿತಿಯಲ್ಲಿದ್ದ ರೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಿದ್ದಣ್ಣ ಮೃತ ದುರ್ದೈವಿ. ಜಿಮ್ಸ್ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಾಗಿದ್ದ ಸಿದ್ದಣ್ಣ ಅವರಿಗೆ ನೀಡಲಾಗಿದ್ದ ಗ್ಲುಕೋಸ್ ಪೈಪ್ ಕಳಚಿ ರಕ್ತಸ್ರಾವವಾಗಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಘಟನೆ ಸಂಭವಿಸಿದೆ. ತೀವ್ರ ರಕ್ತಸ್ರಾವದಿಂದ ಸಿದ್ದಣ್ಣ ಸ್ಥಿತಿ ಗಂಭೀರವಾಗಿತ್ತು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಕಲಬುರಗಿಯ ಮೇಳಕುಂದಾ ಗ್ರಾಮದ ನಿವಾಸಿ ಸಿದ್ದಣ್ಣ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಅಸ್ವಸ್ಥರಾಗಿದ್ದ ಅವರನ್ನು ಕಳೆದ ನಾಲ್ಕು ದಿನಗಳಿಂದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿನ್ನೆ ಗ್ಲುಕೋಸ್ ಪೈಪ್ ಕಳಚಿ ರಕ್ತಸ್ರಾವವಾಗುತ್ತಿತ್ತು. ಇದನ್ನು ಕಂಡ ಕುಟುಂಬದವರು ವೈದ್ಯರಿಗೆ ತಿಳಿಸಿದ್ದಾರೆ. ಅಷ್ಟೊತ್ತಿಗಾಗಲೇ ತೀವ್ರ ರಕ್ತಸ್ರಾವವಾಗಿ ಅವರ ಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು ಎಂದು ಆರೋಪಿಸಲಾಗಿದೆ. ಸಿದ್ದಣ್ಣಗೆ ಚಿಕಿತ್ಸೆ ಮುಂದುವರೆಸಿದ್ದರೂ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಕುಟುಂಬದವರು ವೈದ್ಯರ ಬೇಜವಾಬ್ದಾರಿಗೆ ಸಿದ್ದಣ್ಣ ಬಲಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ವೈದ್ಯರು ಹೇಳುವ ಪ್ರಕಾರ ರೋಗಿ ತೀವ್ರ ಅಸ್ವಸ್ಥರಾಗಿದ್ದರು. ತಡರಾತ್ರಿ ಹೃದಯಾಘಾತವಾಗಿದೆ. ಹಾಗಾಗಿ ಸಾವನ್ನಪ್ಪಿದ್ದಾರೆ. ಸ್ವಲ್ಪ ರಕ್ತ ಹೋದ ಮಾತ್ರಕ್ಕೆ ಯಾರೂ ಸಾವನ್ನಪ್ಪಲ್ಲ. ಸಿದ್ದಣ್ಣ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ.