ಕಲಬುರಗಿ: ಭಾರಿ ಮಳೆಯಿಂದಾಗಿ ರೈತರು ಬೆಳೆದಿರುವ ಬೆಳೆಗಳು ನೀರುಪಾಗಿದ್ದು, ಜಮೀನುಗಳು ಜಲಾವೃತಗೊಂಡಿವೆ. ಅನ್ನದಾತರ ಬದುಕು ಮೂರಾಬಟ್ಟೆಯಾಗಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರ ಜಮೀನುಗಳಿಗೆ ಖುದ್ದು ಭೇತಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮಕ್ಕಾಗಿ ಕಲಬುರಗಿಗೆ ಆಗಮಿಸಿರುವ ಸಿಎಂ ಸಿದ್ದರಾಮಯ್ಯ ರೈತರ ಜಮೀನಿಗೆ ಭೇಟಿ ನೀಡಿ ಸಂಕಷ್ಟ ಪರಿಶೀಲಿಸಿದರು. ಕಲಬುರಗಿಯ ಫರಹತಾಬಾದ್ ಗ್ರಾಮದಲ್ಲಿ ರೈತ ಚನ್ನಬಸಪ್ಪ ಸಜ್ಜನ ಎಂಬುವವರ 27 ಎಕರೆ ಹೊಲವನ್ನು ಪರಿಶೀಲಿಸಿದರು. ಅವರು ಬೆಳೆದಿರುವ ತೊಗರ್ ಬೆಳೆ ಸಂಪೂರ್ಣವಾಗಿ ಹಾಳಾಗಿರುವುದನ್ನು ಗಮನಿಸಿದರು.
ರೈತರೊಂದಿಗೆ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ ಎಷ್ಟು ಎಕರೆ ತೊಗರಿ ಬೆಳೆದಿದ್ದೀರಿ? ಇಳುವರಿ ಸ್ವಲ್ಪನಾದರೂ ಬರುತ್ತದೆಯೇ? ಎಂದು ಪ್ರಶ್ನಿಸಿದರು. ಈ ವೇಳೆ ರೈತರು ಮಳೆಯಿಂದಾಗಿ ತೊಗರಿ ಗಿಡದ ಕಾಂಡ ಕೊಳೆತಿರುವುದರಿಂದ ತೊಗರಿ ಹೂ ಬಿಡುವುದಿಲ್ಲ. ಇಡೀ ಬೆಳೆ ನಾಶವಾಗಿದೆ. ಬೇರೆ ಬೆಳೆ ಬಿತ್ತಬೇಕಾಗುತ್ತದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಕಣ್ಣೀರಿಟ್ಟರು.
ಇದೇ ವೇಳೆ ರೈತರ ಜಮೀನು ಹಾನಿಯಾಗಿರುವ ಬಗ್ಗೆ ಹಾಗೂ ಬೆಳೆ ನಾಶವಾಗಿರುವ ಬಗ್ಗೆ ಡ್ರೋನ್ ಚಿತ್ರಗಳ ಮೂಲಕವೂ ಸಿಎಂ ಪರಿಶೀಲನೆ ನಡೆಸಿದರು.