ತುಮಕೂರು: ಕೆ.ಎನ್.ರಾಜಣ್ಣರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣ ಬಂದ್ ಗೆ ಕರೆ ನೀಡಿರುವ ರಾಜಣ್ಣ ಬೆಂಬಲಿಗರು, ಅಭಿಮಾನಿಗಳು ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಜಣ್ಣಾ ವಜಾ ಹಿಂಪಡೆಯಬೇಕು. ಮತ್ತೆ ಅವರನ್ನು ಸಚಿವರನ್ನಾಗಿ ಮುಂದುವರೆಸುವಂತೆ ಆಗ್ರಹಿಸಿದ್ದಾರೆ.
ರಾಜಣ್ಣ ಅಭಿಮಾನಿ ಶಿವಲಿಂಗ ಎಂಬುವವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಸ್ಥಳದಲ್ಲಿದ್ದವರು ತಕ್ಷಣ ಅವರನ್ನು ತಡೆದಿದ್ದಾರೆ. ಶಿವಲಿಂಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಂ.ಎನ್.ಕೆ ಸಮುದಾಯ ಭವನದ ಬಳಿ ಜಮಾವಣೆಗೊಂಡಿರುವ ರಾಜಣ್ಣ ಬೆಂಬಲಿಗರು ರಾಜಣ್ಣ ಅವರನ್ನು ವಜಾಗೊಳಿಸಿರುವ ಕ್ರಮ ಖಂಡಿಸಿದರು. ಮತ್ತೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಲುವಂತೆ ಒತ್ತಾಯಿಸಿದ್ದಾರೆ.