ಜಿಲ್ಲೆಯ ಯುವ ಜನತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಅ.30 ರಂದು ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜನೆಗೆ ಕ್ರಮಕೈಗೊಳ್ಳುವಂತೆ ಲೋಕಸಭಾ ಸದಸ್ಯರಾದ ಶ್ರೇಯಸ್ ಎಂ ಪಟೇಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉದ್ಯೋಗ ಮೇಳ ಕುರಿತು ಅಧಿಕಾರಿಗಳೊಂದಿಗೆ ಪೂರ್ವ ಸಿದ್ದತಾ ಸಭೆ ನಡೆಸಿ ಮಾತನಾಡಿದ ಅವರು ಯುವ ಜನತೆ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಿಂದಲೂ ಪ್ರಚಾರ ನೀಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಉದ್ಯೋಗ ಮೇಳದ ಕುರಿತು ಎಲ್ಲೆಡೆ ಮಾಹಿತಿಗಾಗಿ ಪೋಸ್ಟರ್ಗಳನ್ನು ಅಳವಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು, ಉದ್ಯೋಗ ಮೇಳದಲ್ಲಿ ಭಾಗವಹಿಸಲು ನೊಂದಣಿ ಮಾಡಿಕೊಳ್ಳುವಂತೆ ಅರಿವು ಮೂಡಿಸಿ ಎಂದು ತಿಳಿಸಿದರು.
ಎಸ್.ಎಸ್ಎಲ್.ಸಿ, ಪಿಯುಸಿ, ಐಟಿಐ ಡಿಪ್ಲೋಮೊ, ಪದವಿ ವ್ಯಾಸಾಂಗ ಮಾಡಿರುವರಿಗೂ ಕೂಡ ಉದ್ಯೋಗ ಕಲ್ಪಿಸಲು ಹೆಚ್ಚಿನ ಉದ್ಯೋಗದಾತ ಕಂಪನಿಗಳನ್ನು ಆಹ್ವಾನಿಸುವಂತೆ ಉದ್ಯೋಗಾಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಮಟ್ಟದಲ್ಲಿಯೂ ಕೂಡ ತಹಸಿಲ್ದಾರ್ ಹಾಗೂ ಕಾರ್ಯನಿರ್ವಹಕ ಅಧಿಕಾರಿಗಳು ಸಭೆಯ ಸ್ಥಳೀಯವಾಗಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಂಡು ಭಾಗವಹಿಸಲು ಅರಿವು ಮೂಡಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಅವರು ಕೃಷಿ ಪ್ರಧಾನವಾದ ಜಿಲ್ಲೆಯಾಗಿರುವುದರಿಂದ ಕೃಷಿ ಒತ್ತು ನೀಡುವ ಕಂಪನಿಗಳನ್ನು ಉದ್ಯೋಗ ಮೇಳಕ್ಕೆ ಆಹ್ವಾನಿಸಬೇಕು ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಬಿ.ಆರ್ ಪೂರ್ಣಿಮಾ ಅವರು ಮಾತನಾಡಿ ಗ್ರಾಮ ಪಂಚಾಯಿತಿ ಹಂತದಲ್ಲಿ ಹೆಚ್ಚಿನ ಪ್ರಚಾರ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿ ಹೆಚ್ಚಿನ ಯುವಜನತೆ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಉತ್ತೇಜಿಸಲಾಗುವುದು ಎಂದು ತಿಳಿಸಿದರು.ಈ ವೇಳೆಯಲ್ಲಿ ಇಂಡಿಯಾ ಸ್ಕಿಲ್ಸ್-2025ರ ಕುರಿತಾದ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಸಭೆಯಲ್ಲಿ ಜಿಲ್ಲಾ ಉದ್ಯೋಗಧಿಕಾರಿ ವಿಜಯಲಕ್ಷ್ಮಿ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.