ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ರಸಗೊಬ್ಬರ ಅಭಾವ ಶೀಘ್ರ ಬಗೆಹರಿಸುವಂತೆ ಒತ್ತಾಯಿಸಿ ಜೆಡಿಎಸ್ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ನಾಡಗೌಡ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯದ ರಸಗೊಬ್ಬರ ಸಮಸ್ಯೆಯ ಕುರಿತು ಮನವರಿಕೆ ಮಾಡಿಕೊಟ್ಟಿಲ್ಲ. ಕೇಂದ್ರ ಸರ್ಕಾರ ರಸಗೊಬ್ಬರ ನೀಡಿಲ್ಲ ಎಂದು ಪತ್ರ ಬರೆದು ಕುಳಿತರೆ ಆಗುವುದಿಲ್ಲ. ಕೇಂದ್ರದ ಕಡೆ ಬೊಟ್ಟು ಮಾಡಿದರೆ ಸಮಸ್ಯೆ ಬಗ್ಗೆ ಹರಿಯುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಯೂರಿಯಾ, ಡಿಎಪಿ ರಸಗೊಬ್ಬರ ಅಭಾವ ತೀವ್ರವಾಗಿದೆ. ನೀರಾವರಿ ಪ್ರದೇಶದಲ್ಲಿ ಶೇಕಡ 80ರಷ್ಟು ನಾಟಿಯಾಗಿದ್ದು, ಗೊಬ್ಬರದ ಬೇಡಿಕೆ ಹೆಚ್ಚಾಗಿದೆ. ಕೇಂದ್ರ ಸರ್ಕಾರ 6.8 ಲಕ್ಷ ಮೆಟ್ರಿಕ್ ರಸಗೊಬ್ಬರವನ್ನು ರಾಜ್ಯಕ್ಕೆ ಕಳುಹಿಸಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ 5.27 ಲಕ್ಷ ಟನ್ ಮಾತ್ರ ನೀಡಿರುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದ್ದು, ಕಾಳಸಂರೆಯಲ್ಲಿ ರಸಗೊಬ್ಬರ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.