ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅತಿ ಕಡಿಮೆ ಸೀಟ್ ಪಡೆದುಕೊಂಡಿದ್ದು, ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎದುರಿಸುವ ಸಲುವಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ.
ಇದರ ಮಧ್ಯೆ ಈ ಮೈತ್ರಿ ಕುರಿತು ಟಾಂಗ್ ನೀಡಿರುವ ಸಚಿವ ಜಮೀರ್ ಅಹ್ಮದ್ ಖಾನ್, ಮುಸ್ಲಿಂ ಸಮುದಾಯ ಜೆಡಿಎಸ್ ಗೆ ಮತ ಕೊಟ್ಟಿದ್ದಕ್ಕೆ 19 ಸ್ಥಾನ ಬಂದಿದೆ. ಇಲ್ಲದಿದ್ದರೆ 5 ರಿಂದ ಆರು ಸ್ಥಾನ ಬರುತ್ತಿತ್ತು ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಜಮೀರ್ ಅಹ್ಮದ್ ಪೋಸ್ಟ್ ಮಾಡಿದ್ದು, ಮಾನ್ಯ ಹೆಚ್.ಡಿ, ಕುಮಾರಸ್ವಾಮಿಯವರೇ, ಮುಸ್ಲಿಂ ಸಮುದಾಯದ ಜತೆ ನಾನು ನಿಂತಿದ್ದೆ ಆದರೆ ಆ ಸಮುದಾಯ ಜೆಡಿಎಸ್ ಜತೆ ನಿಲ್ಲಲಿಲ್ಲ ಎಂದು ಹೇಳಿರುವ ನೀವು ಚನ್ನಪಟ್ಟಣದಲ್ಲಿ ಯಾರ ಮತಗಳಿಂದ ಗೆದ್ದಿರಿ ಹೇಳಿಬಿಡಿ. ಚನ್ನಪಟ್ಟಣದಲ್ಲಿ ಮುಸ್ಲಿಂ ಸಮುದಾಯ ಒಂದಾಗಿ ಮತ ನೀಡಿರದಿದ್ದರೆ ನೀವು ಗೆಲ್ಲುತ್ತಿದ್ದರೆ ಎಂಬುದನ್ನು ಎದೆ ಮುಟ್ಟಿಕೊಂಡು ಹೇಳಿ. ಹೊಳೆನರಸೀಪುರದಲ್ಲಿ ಎಚ್. ಡಿ. ರೇವಣ್ಣ, ತುರುವೇಕೆರೆ ಕೃಷ್ಣಪ್ಪ, ಚಿಕ್ಕ ನಾಯಕನಹಳ್ಳಿ ಸುರೇಶ್ ಬಾಬು, ಗುರುಮಿಠಕಲ್ ನಾಗನಗೌಡ ಕಂದಕೂರು, ದೇವದುರ್ಗ ಕರೆಮ್ಮ, ಚನ್ನರಾಯಪಟ್ಟಣ ಬಾಲಕೃಷ್ಣ ಇವರೆಲ್ಲ ಗೆದ್ದದ್ದು ಯಾರ ಮತಗಳಿಂದ ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಂ ಸಮುದಾಯ ಜೆಡಿಎಸ್ ಗೆ ಮತ ಕೊಟ್ಟಿದ್ದಕ್ಕೆ 19 ಸ್ಥಾನ ಬಂದಿದೆ. ಇಲ್ಲದಿದ್ದರೆ 5 ರಿಂದ ಆರು ಸ್ಥಾನ ಬರುತ್ತಿತ್ತು. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಕೋಮುವಾದಿ ಬಿಜೆಪಿ ವಿರುದ್ಧ ಇದ್ದವರು. ಆದರೆ ನೀವು ನಿಮ್ಮ ರಾಜಕಾರಣಕ್ಕೆ ಗೌಡರ ತತ್ವ ಸಿದ್ದಾಂತ ಬಲಿ ಕೊಟ್ಟಿದ್ದಿರಿ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.